ADVERTISEMENT

ಸೆನ್ಸೆಕ್ಸ್‌, ನಿಫ್ಟಿ ಏರಿಕೆ: ಹೂಡಿಕೆದಾರರ ಸಂಪತ್ತು ₹5.72 ಲಕ್ಷ ಕೋಟಿ ವೃದ್ಧಿ

ಪಿಟಿಐ
Published 21 ಮಾರ್ಚ್ 2024, 16:03 IST
Last Updated 21 ಮಾರ್ಚ್ 2024, 16:03 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪ್ರಸಕ್ತ ವರ್ಷದಲ್ಲಿ ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತಗೊಳಿಸುವ ಬಗ್ಗೆ ನೀಡಿದ ಸುಳಿವಿನಿಂದಾಗಿ ಗುರುವಾರ ಷೇರುಪೇಟೆಗಳಲ್ಲಿ ಗೂಳಿಯ ನಾಗಾಲೋಟ ಮುಂದುವರಿದಿದ್ದು, ಸೂಚ್ಯಂಕಗಳು ಶೇ 1ರಷ್ಟು ಏರಿಕೆ ಕಂಡಿವೆ.

ಹೂಡಿಕೆದಾರರ ಸಂಪತ್ತು ಒಂದೇ ದಿನ ₹5.72 ಲಕ್ಷ ಕೋಟಿ ಹೆಚ್ಚಳವಾಗಿದೆ. ಬಿಎಸ್‌ಇಯ ಎಂ–ಕ್ಯಾಪ್‌ ಒಟ್ಟು ₹379 ಲಕ್ಷ ಕೋಟಿಗೆ ಮುಟ್ಟಿದೆ. 

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 539 ಅಂಶ ಏರಿಕೆಯಾಗಿ 72,641ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನಲ್ಲಿ 780 ಅಂಶಗಳಿಗೆ (ಶೇ 1.08) ಏರಿಕೆಯಾಗಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 172 ಅಂಶ ಹೆಚ್ಚಳ ಕಂಡು, 22,011ಕ್ಕೆ ಅಂತ್ಯಗೊಂಡಿತು. 

ADVERTISEMENT

ಬಿಎಸ್‌ಇ ಮಿಡ್‌ಕ್ಯಾಪ್‌ ಶೇ 2.36 ಮತ್ತು ಸ್ಮಾಲ್‌ಕ್ಯಾಪ್‌ ಷೇರಿನ ಮೌಲ್ಯವು ಶೇ 2.01ರಷ್ಟು ಏರಿಕೆಯಾಗಿದೆ.

ಎನ್‌ಟಿಪಿಸಿ, ಪವರ್‌ಗ್ರಿಡ್‌, ಟಾಟಾ ಸ್ಟೀಲ್‌, ಇಂಡಸ್‌ಇಂಡ್‌ ಬ್ಯಾಂಕ್‌, ಟಾಟಾ ಮೋಟರ್ಸ್‌, ಜೆಎಸ್‌ಡಬ್ಲ್ಯು, ಟೆಕ್‌ ಮಹೀಂದ್ರ ಮತ್ತು ಲಾರ್ಸೆನ್‌ ಆ್ಯಂಡ್‌ ಟೊರ್ಬೊ ಕಂಪನಿಗಳ ಷೇರಿನ ಮೌಲ್ಯ ಏರಿಕೆಯಾಗಿದೆ.

ಭಾರ್ತಿ ಏರ್‌ಟೆಲ್‌, ಐಸಿಐಸಿಐ ಬ್ಯಾಂಕ್‌, ಮಾರುತಿ ಮತ್ತು ಏಷ್ಯನ್‌ ಪೇಂಟ್ಸ್‌ ಷೇರಿನ ಮೌಲ್ಯ ಇಳಿದಿದೆ. 

ಸಿಯೋಲ್‌, ಟೋಕಿಯೊ ಮತ್ತು ಹಾಂಗ್‌ಕಾಂಗ್‌ ಮಾರುಕಟ್ಟೆಗಳು ಏರಿಕೆ ಕಂಡಿದ್ದರೆ, ಶಾಂಘೈ ಇಳಿಕೆಯಾಗಿದೆ.

ಎಲ್‌ಐಸಿ ಷೇರಿನ ಮೌಲ್ಯ ಏರಿಕೆ
ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪ್ರತಿ ಷೇರಿನ ಮೌಲ್ಯ ಬಿಎಸ್‌ಇಯಲ್ಲಿ ಶೇ 4.05 ಮತ್ತು ಎನ್‌ಎಸ್‌ಇಯಲ್ಲಿ ಶೇ 3.96ರಷ್ಟು ಏರಿಕೆ ಆಗಿದೆ. ಪ್ರತಿ ಷೇರಿನ ಬೆಲೆ ಕ್ರಮವಾಗಿ ₹902 ಮತ್ತು ₹901.25 ಆಗಿದೆ. ಆರಂಭಿಕ ಸಾರ್ವಜನಿಕ ಕೊಡುಗೆಯಲ್ಲಿ (ಐಪಿಒ) ಎಲ್‌ಐಸಿಯ ಪ್ರತಿ ಷೇರಿನ ಬೆಲೆ ₹949 ಆಗಿತ್ತು. ಪ್ರಸಕ್ತ ವರ್ಷದ ಫೆಬ್ರುವರಿ 9ರಂದು ಷೇರಿನ ಬೆಲೆಯು ₹1175ಕ್ಕೆ ಮುಟ್ಟಿದ್ದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿತ್ತು.  ಕೇಂದ್ರ ಸರ್ಕಾರವು ಇತ್ತೀಚೆಗೆ ಎಲ್‌ಐಸಿ ನೌಕರರ ವೇತನ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಇದು ಕಂಪನಿಗೆ ಆರ್ಥಿಕ ಹೊರೆಯಾಗಲಿದೆ ಎಂದು ಹೇಳಲಾಗಿದೆ. ಹಾಗಾಗಿ ಷೇರುಪೇಟೆಯ ಹಿಂದಿನ ವಹಿವಾಟುಗಳಲ್ಲಿ ಎಲ್‌ಐಸಿ ಷೇರಿನ ಬೆಲೆ ಇಳಿಕೆಯಾಗಿತ್ತು. ಸದ್ಯ ಷೇರಿನ ಬೆಲೆಯು ಐಪಿಒ ಅವಧಿಯಲ್ಲಿ ನಿಗದಿಪಡಿಸಿದ್ದ ಬೆಲೆಗಿಂತಲೂ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.