
ನವದೆಹಲಿ: ವಾಹನ ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಇದುವರೆಗೆ ಭಾರತದ ಮಾರುಕಟ್ಟೆಯಲ್ಲಿ 3 ಕೋಟಿಗೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದೆ.
1983ರ ಡಿಸೆಂಬರ್ 14ರಂದು ಕಂಪನಿಯು ತನ್ನ ‘ಮಾರುತಿ 800’ ಮಾದರಿಯ ವಾಹನದ ಮೂಲಕ ದೇಶದ ಮಾರುಕಟ್ಟೆಗೆ ಪ್ರವೇಶಿಸಿತ್ತು.
ಮಾರುತಿ ಸುಜುಕಿ ಕಂಪನಿಗೆ ದೇಶದಲ್ಲಿ ಮೊದಲ 1 ಕೋಟಿ ವಾಹನಗಳನ್ನು ಮಾರಾಟ ಮಾಡಲು 28 ವರ್ಷ 2 ತಿಂಗಳ ಸಮಯ ಬೇಕಾಗಿತ್ತು. ನಂತರ ಮತ್ತೆ ಒಂದು ಕೋಟಿ ವಾಹನಗಳು ಮಾರಾಟವಾಗಲು 7 ವರ್ಷದ ಐದು ತಿಂಗಳು ಬೇಕಾದವು. ಉಳಿದ ಇನ್ನೊಂದು ಕೋಟಿ ವಾಹನಗಳು ಮಾರಾಟವಾಗಲು 6 ವರ್ಷದ 4 ತಿಂಗಳು ತೆಗೆದುಕೊಂಡಿತು.
ಕಂಪನಿಯು ಮಾರಾಟ ಮಾಡಿರುವ ವಾಹನಗಳ ಪೈಕಿ ಆಲ್ಟೊ ಮಾದರಿಯು ಹೆಚ್ಚಿನ ಬೇಡಿಕೆ ಕಂಡಿದೆ. ಆಲ್ಟೊ ಮಾದರಿಯ 47 ಲಕ್ಷಕ್ಕೂ ಅಧಿಕ ಕಾರುಗಳು ಮಾರಾಟವಾಗಿವೆ. ವ್ಯಾಗನ್ ಆರ್ 34 ಲಕ್ಷ, ಸ್ವಿಫ್ಟ್ 32 ಲಕ್ಷಕ್ಕೂ ಹೆಚ್ಚು ಮಾರಾಟವಾಗಿದೆ. ಬ್ರೆಜಾ ಮತ್ತು ಫ್ರಾಂಕ್ಸ್ ಮಾದರಿಯ ವಾಹನಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿವೆ ಎಂದು ಕಂಪನಿ ಬುಧವಾರ ತಿಳಿಸಿದೆ.
‘ಪ್ರತಿ ಸಾವಿರ ಜನರಲ್ಲಿ ಅಂದಾಜು 33 ಜನ ಕಾರಿನ ಮಾಲೀಕತ್ವ ಹೊಂದಿದ್ದಾರೆ. ದೇಶದಲ್ಲಿ ನಮ್ಮ ಕಂಪನಿಗೆ ಬೆಳೆಯಲು ಇನ್ನೂ ಬಹಳಷ್ಟು ಅವಕಾಶ ಇದೆ’ ಎಂದು ಮಾರುತಿ ಸುಜುಕಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಿಸಾಶಿ ತಕೆಯುಚಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.