ADVERTISEMENT

ಲಾಭಾಂಶ: ಮೈಂಡ್‌ಟ್ರೀ ಸಮರ್ಥನೆ

₹ 320 ಕೋಟಿ ವಿಶೇಷ ಲಾಭಾಂಶ ನೀಡಲಿರುವ ಕಂಪನಿ

ಪಿಟಿಐ
Published 17 ಏಪ್ರಿಲ್ 2019, 17:53 IST
Last Updated 17 ಏಪ್ರಿಲ್ 2019, 17:53 IST
mindtree
mindtree   

ನವದೆಹಲಿ: ಪ್ರವರ್ತಕರೂ ಸೇರಿದಂತೆ ಷೇರುದಾರರಿಗೆ ₹ 320 ಕೋಟಿ ವಿಶೇಷ ಲಾಭಾಂಶ ನೀಡುವ ನಿರ್ಧಾರವನ್ನು ಮೈಂಡ್‌ಟ್ರೀ ಸಿಇಒ ರೋಸ್ತೋವ್ ರಾವಣನ್ ಸಮರ್ಥಿಸಿಕೊಂಡಿದ್ದಾರೆ.

ಕಂಪನಿಯ ಬಂಡವಾಳ ವಿತರಣೆ ನೀತಿಯ ಅನುಸಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾರ್ಪೊರೇಟ್‌ ಆಡಳಿತ ನಿಯಮಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ನಾಲ್ಕನೇ ತ್ರೈಮಾಸಿಕದ ಆರ್ಥಿಕ ಸಾಧನೆಗಳನ್ನು ಪ್ರಕಟಿಸುವ ವೇಳೆ, ಕಂಪನಿಯು ಪ್ರತಿ ಷೇರಿಗೆ ₹ 3ರಂತೆ ಮಧ್ಯಂತರ ಲಾಭಾಂಶ ಘೋಷಿಸಿದೆ.

ADVERTISEMENT

ಇದಲ್ಲದೆ,ಕಂಪನಿ 20 ವರ್ಷ ಪೂರೈಸಿರುವ ಸಂಭ್ರಮಾಚರಣೆ ಮತ್ತು ವಾರ್ಷಿಕ ವರಮಾನ ₹ 6,900 ಕೋಟಿ ದಾಟಿರುವುದಕ್ಕಾಗಿ ಶೇ 200ರಷ್ಟು (ಪ್ರತಿ ಷೇರಿಗೆ ₹ 20ರಂತೆ) ಪ್ರವರ್ತಕರೂ ಸೇರಿದಂತೆ ಷೇರುದಾರರಿಗೆ ವಿಶೇಷ ಲಾಭಾಂಶವನ್ನೂ ಆಡಳಿತ ಮಂಡಳಿ ಶಿಫಾರಸು ಮಾಡಿದೆ.

ಈ ಎರಡೂ ಲಾಭಾಂಶಗಳ ಒಟ್ಟಾರೆ ಮೊತ್ತ ₹ 530 ಕೋಟಿಗಳಷ್ಟಾಗಲಿದೆ.ಜೂನ್‌ ಅಥವಾ ಜುಲೈನಲ್ಲಿ ನಡೆಯಲಿರುವ ಕಂಪನಿಯ ವಾರ್ಷಿಕ ಮಹಾಸಭೆಯಲ್ಲಿ ವಿಶೇಷ ಲಾಭಾಂಶಕ್ಕೆ ಒಪ್ಪಿಗೆ ಸಿಗಬೇಕಾಗಿದೆ.

ವಿಶೇಷ ಲಾಭಾಂಶ ನ್ಯಾಯಸಮ್ಮತ: ವಿಶೇಷ ಲಾಭಾಂಶ ವಿತರಣೆ ಕುರಿತು ಎಲ್‌ಆ್ಯಂಡ್‌ಟಿ ಸಂಸ್ಥೆಯಿಂದ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲವೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ, ‘ಆ ಬಗ್ಗೆ ಏನೂ ಗೊತ್ತಿಲ್ಲ. ಆದರೆ ನಿಯಮಗಳ ಅನುಸಾರವಾಗಿಯೇ ನಿರ್ಧಾರ ತೆಗೆದು
ಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

‘ವಾರ್ಷಿಕ ಮಹಾಸಭೆಯಲ್ಲಿ ಮತ ಹಾಕಲು ಷೇರುದಾರರಿಗೆ ಅವಕಾಶ ಸಿಗಲಿದೆ. ಆದರೆ, ಕಂಪನಿಯ ಜೀವಮಾನ ಸಾಧನೆ ಮಾಡಿರುವುದಕ್ಕಾಗಿ ನಿಯಮದಡಿಯಲ್ಲಿಯೇ ಷೇರುದಾರರಿಗೆ ನಗದನ್ನು ವರ್ಗಾಯಿಸಲು ಮುಂದಾಗಿದ್ದೇವೆ. ವಿಶೇಷ ಲಾಭಾಂಶ ನ್ಯಾಯಸಮ್ಮತವಾಗಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಷೇರು ಖರೀದಿ:ಎಲ್‌ಆ್ಯಂಡ್‌ಟಿ ಸಂಸ್ಥೆಯು ಮೈಂಡ್‌ಟ್ರೀನಲ್ಲಿ ಷೇರು ಖರೀದಿಗೆ ಮುಂದಾಗಿದೆ. ಮಾರ್ಚ್‌ನಲ್ಲಿ ಕೆಫೆ ಕಾಫಿ ಡೇ ಮಾಲೀಕ ವಿ.ಜಿ ಸಿದ್ದಾರ್ಥ ಅವರು ಮೈಂಡ್‌ಟ್ರೀನಲ್ಲಿ ಹೊಂದಿದ್ದ ಶೇ 20.32ರಷ್ಟು ಷೇರು ಎಲ್‌ಆ್ಯಂಡ್‌ಟಿ ಖರೀದಿಸಿತ್ತು. ಇದಲ್ಲದೆ ಮುಕ್ತ ಮಾರುಕಟ್ಟೆಯ ಮೂಲಕ ಶೇ 15ರಷ್ಟು ಷೇರು ಖರೀದಿಸಲು ಉದ್ದೇಶಿಸಿದೆ.

ಮುಕ್ತ ಮಾರುಕಟ್ಟೆ ಕೊಡುಗೆ ಮೇ 14 ರಿಂದ ಮೇ 27ರವರೆಗೆ ಇರಲಿದೆ. ಈ ಕೊಡುಗೆಯಲ್ಲಿ ಪ್ರತಿ ಷೇರಿಗೆ ₹ 980ರಂತೆ ಶೇ 31ರಷ್ಟು ಷೇರುಗಳನ್ನು ಎಲ್‌ಆ್ಯಂಡ್‌ಟಿ ಖರೀದಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.