ADVERTISEMENT

ಫಾಕ್ಸ್‌ಕಾನ್‌ ಹೂಡಿಕೆ ನಿಶ್ಚಿತ: ಸಚಿವ ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 19:45 IST
Last Updated 6 ಮಾರ್ಚ್ 2023, 19:45 IST
ಸಚಿವ ಮುರುಗೇಶ ನಿರಾಣಿ
ಸಚಿವ ಮುರುಗೇಶ ನಿರಾಣಿ   

ಬೆಂಗಳೂರು: ರಾಜ್ಯದಲ್ಲಿ ಫಾಕ್ಸ್‌ಕಾನ್‌ ಕಂಪನಿ ಹೂಡಿಕೆ ಮಾಡುವುದು ನಿಶ್ಚಿತ. ಎಷ್ಟು ಪ್ರಮಾಣದ ಹೂಡಿಕೆ ಆಗಲಿದೆ ಎಂಬುದು ಇನ್ನಷ್ಟೇ ನಿರ್ಧಾರವಾಗಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಕರ್ನಾಟಕ ಘಟಕದ ವಾರ್ಷಿಕ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ಫಾಕ್ಸ್‌ಕಾನ್‌ ಕಂಪನಿಯ ಪ್ರಮುಖರ ಜತೆ ಶುಕ್ರವಾರ ಸುದೀರ್ಘ ಚರ್ಚೆ ನಡೆದಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಕಂಪನಿ ಸಂಪೂರ್ಣ ಒಲವು ತೋರಿದೆ. ಈವರೆಗಿನ ಬೆಳವಣಿಗೆಗಳು ಏನೇ ಇರಬಹುದು. ಆದರೆ, ಫಾಕ್ಸ್‌ಕಾನ್‌ ಇಲ್ಲಿ ಹೂಡಿಕೆ ಮಾಡಲಿದೆ ಎಂಬುದರಲ್ಲಿ ಅನುಮಾನವಿಲ್ಲ’ ಎಂದರು.

ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಅತ್ಯಂತ ವೇಗವಾಗಿ ನಡೆಯುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ 5,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಲಿದೆ. ಎಲ್ಲ ಪ್ರಮುಖ ನಗರಗಳಿಗೂ ಹೈಸ್ಪೀಡ್‌ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಜಾರಿಗೆ ಬರಲಿದೆ. ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ವೇಗವಾಗಿ ನಡೆಯುತ್ತಿದೆ. ಇವೆಲ್ಲವೂ ಕರ್ನಾಟಕವನ್ನು ಹೂಡಿಕೆದಾರರ ಆಸಕ್ತಿಯ ತಾಣವಾಗಿಸಿವೆ ಎಂದರು.

ADVERTISEMENT

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌. ಸೆಲ್ವಕುಮಾರ್‌, ಸಿಐಐ ದಕ್ಷಿಣ ವಲಯ ಘಟಕದ ಅಧ್ಯಕ್ಷೆ ಸುಚಿತ್ರಾ ಕೆ. ಎಲ್ಲಾ, ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ್ ಎಂ. ರಂಗ ಉಪಸ್ಥಿತರಿದ್ದರು.

ಬೊಮ್ಮಾಯಿಗೆ ಫಾಕ್ಸ್‌ಕಾನ್‌ ಪತ್ರ
ಬೆಂಗಳೂರು:
ಬೆಂಗಳೂರಿನಲ್ಲಿ ‘ಪ್ರಾಜೆಕ್ಟ್‌ ಎಲಿಫೆಂಟ್‌’ ಯೋಜನೆ ಅನುಷ್ಠಾನಗೊಳಿಸಲು ಉತ್ಸುಕರಾಗಿದ್ದೇವೆ ಎಂದು ಐಫೋನ್‌ ಉತ್ಪಾದಿಸುವ ಪ್ರಮುಖ ಗುತ್ತಿಗೆದಾರ ಕಂಪನಿ, ತೈವಾನ್‌ನ ಎಲೆಕ್ಟ್ರಾನಿಕ್ಸ್ ದೈತ್ಯ ಫಾಕ್ಸ್‌ಕಾನ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೋಮವಾರ ಪತ್ರ ಬರೆದಿದ್ದು, ಆ ಮೂಲಕ ಘಟಕ ಸ್ಥಾಪನೆ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದೆ.

‘ಬೆಂಗಳೂರು ಭೇಟಿ ಫಲಪ್ರದವಾಗಿದೆ. ಯೋಜನೆಯ ಜಾರಿಗೆ ನಮ್ಮ ತಂಡ ಸರ್ಕಾರದ ಜತೆ ನಿಕಟ ಸಂಪರ್ಕದಲ್ಲಿರುತ್ತದೆ. ಈ ಯೋಜನೆ ಕಂಪನಿಯ ಇತರ ಯೋಜನೆಗಳ ಅನುಷ್ಠಾನಕ್ಕೂ ಅಡಿಪಾಯವಾಗಲಿದೆ. ಮೆಕ್ಯಾನಿಕಲ್‌, ಎಲೆಕ್ಟ್ರಿಕ್‌ ವಾಹನ, ಸೆಮಿ ಕಂಡಕ್ಟರ್‌ ವಲಯದಲ್ಲಿ ಕಂಪನಿಗೆ ಸಹಕಾರಿಯಾಗಲಿದೆ’ ಎಂದು ಫಾಕ್ಸ್‌ಕಾನ್‌ ಸಿಇಒ ಯಂಗ್‌ ಲಿ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.