
ನವದೆಹಲಿ: 2034–35ರ ಆರ್ಥಿಕ ವರ್ಷದ ವೇಳೆಗೆ ದೇಶದ ಮ್ಯೂಚುವಲ್ ಫಂಡ್ ಉದ್ಯಮದ ಒಟ್ಟಾರೆ ಸಂಪತ್ತಿನ ನಿರ್ವಹಣಾ ಮೌಲ್ಯವು (ಎಯುಎಂ) ₹300 ಲಕ್ಷ ಕೋಟಿ ದಾಟಬಹುದು ಎಂದು ಜಂಟಿ ವರದಿಯೊಂದು ಮಂಗಳವಾರ ತಿಳಿಸಿದೆ.
ಇದೇ ಅವಧಿಯಲ್ಲಿ ಈಕ್ವಿಟಿ ಆಧಾರಿತ ಹೂಡಿಕೆಯು ₹250 ಲಕ್ಷ ಕೋಟಿಯಷ್ಟಾಗುವ ನಿರೀಕ್ಷೆ ಇದೆ ಎಂದು ಸಲಹಾ ಸಂಸ್ಥೆ ಬೈನ್ ಆ್ಯಂಡ್ ಕಂಪನಿ ಮತ್ತು ಆನ್‌ಲೈನ್ ಹೂಡಿಕೆ ವೇದಿಕೆ ‘ಗ್ರೋವ್’ ತಿಳಿಸಿದೆ.
ಹೂಡಿಕೆದಾರರ ಭಾಗವಹಿಸುವಿಕೆಯಲ್ಲಿನ ಹೆಚ್ಚಳ ಮತ್ತು ಡಿಜಿಟಲ್ ಅಳವಡಿಕೆಯಿಂದ ಈ ಬೆಳವಣಿಗೆ ಆಗುತ್ತಿದೆ ಎಂದು ತಿಳಿಸಿದೆ.
ವರದಿ ಪ್ರಕಾರ, ಪ್ರಸ್ತುತ ದೇಶದಲ್ಲಿ ಮ್ಯೂಚುವಲ್ ಫಂಡ್ (ಎಂ.ಎಫ್) ಉದ್ಯಮದಲ್ಲಿ ಕುಟುಂಬಗಳ ಪಾಲ್ಗೊಳ್ಳುವಿಕೆ ಮುಂದಿನ ದಶಕದ ವೇಳೆಗೆ ಶೇ 10ರಿಂದ ಶೇ 20ಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.
ಷೇರುಗಳ ಖರೀದಿ ಮತ್ತು ಮಾರಾಟವಲ್ಲದೆ, ದೀರ್ಘಾವಧಿ ಹೂಡಿಕೆ ಮಾಡಲು ಹೂಡಿಕೆದಾರರು ಮುಂದಾಗುತ್ತಿದ್ದಾರೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಷೇರುಪೇಟೆಯಲ್ಲಿ ಊಹಾಪೋಹ ಮತ್ತು ಅಪಾಯವನ್ನು ತಡೆಗಟ್ಟಲು ಹಲವಾರು ಕ್ರಮ ಕೈಗೊಂಡಿದೆ. ಇದು ಹೂಡಿಕೆದಾರರಿಗೆ ಉತ್ತೇಜನ ನೀಡಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.