
ನವದೆಹಲಿ: ಹೂಡಿಕೆದಾರರಿಗೆ ಅಂಚೆ ಇಲಾಖೆ ಮೂಲಕವೂ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆಗೆ ಅನುಕೂಲ ಕಲ್ಪಿಸಲು ಮುಂಬೈ ಷೇರುವಿನಿಮಯ ಕೇಂದ್ರವು (ಬಿಎಸ್‌ಇ) ನಿರ್ಧರಿಸಿದ್ದು, ಅಂಚೆ ಇಲಾಖೆ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.
ಈ ಪಾಲುದಾರಿಕೆಯ ಭಾಗವಾಗಿ ಅಂಚೆ ಇಲಾಖೆಯ ಆಯ್ದ ನೌಕರರು ಮತ್ತು ಏಜೆಂಟ್‌ಗಳಿಗೆ ತರಬೇತಿ ನೀಡಿ, ಅಧಿಕೃತ ಮ್ಯೂಚುವಲ್ ಫಂಡ್ ವಿತರಕರಾಗಿ ನೇಮಕ ಮಾಡಲಾಗುತ್ತದೆ. ಈ ಪಾಲುದಾರಿಕೆ ಅವಧಿ ಡಿಸೆಂಬರ್ 12ರಿಂದ ಮೂರು ವರ್ಷವಾಗಿದೆ ಎಂದು ಬಿಎಸ್‌ಇ ತಿಳಿಸಿದೆ.
ಅಂಚೆ ಇಲಾಖೆಯ ಬೃಹತ್ ಜಾಲವನ್ನು ಬಳಸಿಕೊಂಡು ಪ್ರಮುಖವಾಗಿ ಗ್ರಾಮೀಣ ಮತ್ತು ಅರೆನಗರ ಪ್ರದೇಶದಲ್ಲಿನ ಜನರು ಆರ್ಥಿಕ ಪಾಲ್ಗೊಳ್ಳುವಿಕೆಯಲ್ಲಿ ಹೆಚ್ಚಿಸುವ ಉದ್ದೇಶವನ್ನು ಈ ಪಾಲುದಾರಿಕೆ ಹೊಂದಿದೆ. ದೇಶದ ಅತಿದೊಡ್ಡ ಆನ್‌ಲೈನ್ ಮ್ಯೂಚುವಲ್ ಫಂಡ್ ವಿತರಣೆಯ ವ್ಯವಸ್ಥೆಯಾದ ಮುಂಬೈ ಷೇರುವಿನಿಮಯ ಕೇಂದ್ರದ ಸ್ಟಾರ್ ಎಂಎಫ್ ವೇದಿಕೆಯನ್ನು ಬಳಸಿಕೊಂಡು ಈ ಸೇವೆ ನೀಡಲಿದೆ.
ದೇಶದಲ್ಲಿ ವಿನಿಮಯ ಆಧಾರಿತ ವಹಿವಾಟುಗಳಲ್ಲಿ ಈ ವೇದಿಕೆಯು ಶೇ 85ಕ್ಕೂ ಹೆಚ್ಚು ಖಾತೆಗಳನ್ನು ನಿರ್ವಹಣೆ ಮಾಡುತ್ತದೆ. ಪ್ರತಿ ತಿಂಗಳು 7 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತದೆ ಎಂದು ತಿಳಿಸಿದೆ.
‘ಅಂಚೆ ಇಲಾಖೆ ಜೊತೆಗಿನ ಪಾಲುದಾರಿಕೆಯಿಂದ ಹಣಕಾಸಿನ ಉತ್ಪನ್ನಗಳು ಲಭ್ಯವಾಗಲಿದೆ. ಇದರಿಂದ ಲಕ್ಷಾಂತರ ಜನರು ಹೂಡಿಕೆ ಅವಕಾಶ ಮತ್ತು ಆರ್ಥಿಕ ಸಾಕ್ಷರತೆಯೊಂದಿಗೆ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದ್ದೇವೆ’ ಎಂದು ಬಿಎಸ್‌ಇಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸುಂದರರಾಮನ್ ರಾಮಮೂರ್ತಿ ಹೇಳಿದ್ದಾರೆ.
‘ಈ ಪಾಲುದಾರಿಕೆಯಿಂದ ಗ್ರಾಹಕರಿಗೆ ಆಧುನಿಕ ಹೂಡಿಕೆಯ ಆಯ್ಕೆಯನ್ನು ಅಂಚೆ ಇಲಾಖೆ ಒದಗಿಸಲಿದೆ. ಟಯರ್–2 ಮತ್ತು ಟಯರ್–3 ನಗರಗಳಲ್ಲಿ ಮ್ಯೂಚುವಲ್ ಫಂಡ್ ಉದ್ಯಮವು ವೇಗ ಪಡೆದುಕೊಳ್ಳಲಿದ್ದು, ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವ ನಿರೀಕ್ಷೆ ಇದೆ’ ಎಂದು ಅಂಚೆ ಇಲಾಖೆಯ ಪ್ರಧಾನ ವ್ಯವಸ್ಥಾಪಕ ನಿರ್ದೇಶಕಿ (ಸಿಸಿಎಸ್ ಮತ್ತು ಆರ್‌ಬಿ) ಮನೀಷಾ ಬನ್ಸಾಲ್ ಬಾದಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.