ADVERTISEMENT

ಕುಸಿದ ಭತ್ತದ ಧಾರಣೆ: ರೈತರು ಕಂಗಾಲು

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 14:12 IST
Last Updated 11 ಜನವರಿ 2025, 14:12 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮೈಸೂರು: ಜಿಲ್ಲೆಯಲ್ಲಿ ಈ ಬಾರಿ ಭತ್ತದ ಉತ್ಪಾದನೆ ಉತ್ತಮವಾಗಿದ್ದು, ಪೂರೈಕೆ ಹೆಚ್ಚಿರುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ.

ಕೇಂದ್ರ ಸರ್ಕಾರವು 2024–25ನೇ ಸಾಲಿಗೆ ಸಾಮಾನ್ಯ ಭತ್ತಕ್ಕೆ ಕ್ವಿಂಟಲ್‌ಗೆ ₹2,300 ಹಾಗೂ ‘ಎ’ ಗ್ರೇಡ್‌ ಭತ್ತಕ್ಕೆ ₹2,320 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಿದೆ.

ಕಳೆದ ವರ್ಷ ಬರಗಾಲವಿತ್ತು. ಭತ್ತಕ್ಕೆ ನೀರು ದೊರೆಯದೆ ಫಸಲು ಕಡಿಮೆಯಾಗಿತ್ತು. ಇದರಿಂದ ಬೆಲೆ ಏರಿಕೆಯಾಗಿತ್ತು. ಪ್ರತಿ ಕ್ವಿಂಟಲ್‌ಗೆ ₹3,200–₹3,400ರವರೆಗೂ ಮಾರಾಟವಾಗಿತ್ತು.

ADVERTISEMENT

ಈ ವರ್ಷ ಕ್ವಿಂಟಲ್‌ಗೆ ಸರಾಸರಿ ₹2,000–₹2,200 ದರದಲ್ಲಿ ದಲ್ಲಾಳಿಗಳು ರೈತರಿಂದ ಭತ್ತ ಖರೀದಿಸುತ್ತಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಎಂಎಸ್‌ಪಿಗಿಂತಲೂ ಕಡಿಮೆ ದರ ಇರುವುದರಿಂದ ರೈತರು ಕಂಗಾಲಾಗಿದ್ದಾರೆ.

ಕಳೆದ ವರ್ಷ ‘ಜ್ಯೋತಿ’ ತಳಿಯ ಭತ್ತಕ್ಕೆ ಕ್ವಿಂಟಲ್‌ಗೆ ₹3,400ರವರೆಗೆ ದರವಿತ್ತು. ಪ್ರಸ್ತುತ ₹2,500 ದರವಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕ್ವಿಂಟಲ್‌ಗೆ ಸರಾಸರಿ ₹1 ಸಾವಿರ ದರ ಕಡಿಮೆಯಾಗಿದೆ.

ಖರೀದಿ ಕೇಂದ್ರಗಳಲ್ಲಿ ರೈತರ ನೋಂದಣಿ ಪ್ರಕ್ರಿಯೆ ನಡೆದಿದೆ. ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಬೆಲೆ ನಿಯಂತ್ರಿಸುತ್ತಿದ್ದಾರೆ ಎಂಬುದು ರೈತರ ಆರೋಪ.

ಜಿಲ್ಲೆಯಲ್ಲಿ 16 ಖರೀದಿ ಕೇಂದ್ರ ತೆರೆಯಲಾಗಿದೆ. ಈವರೆಗೆ 735 ರೈತರಿಂದ ಒಟ್ಟು 25 ಸಾವಿರ ಕ್ವಿಂಟಲ್‌ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದಾರೆ. ತಂತ್ರಾಂಶ ಸಿದ್ಧಗೊಳ್ಳದ ಕಾರಣ ಖರೀದಿ ಪ್ರಕ್ರಿಯೆ ಆರಂಭಗೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೀಲಗಳ ಕೊರತೆ

(ಚಾಮರಾಜನಗರ ವರದಿ): ಜಿಲ್ಲೆಯಲ್ಲಿ ಭತ್ತದ ಕಟಾವು ಬಹುತೇಕ ಮುಗಿಯುತ್ತಾ ಬಂದಿದೆ. ಈ ಬಾರಿಯೂ ತಡವಾಗಿ ಖರೀದಿ ಕೇಂದ್ರ ತೆರೆಯಲಾಗಿದೆ.

ಪರಿಸ್ಥಿತಿಯ ಲಾಭ ಪಡೆದಿರುವ ತಮಿಳುನಾಡು ಮತ್ತು ಕೇರಳದ ವ್ಯಾಪಾರಿಗಳು ಕಡಿಮೆ ದರಕ್ಕೆ ಭತ್ತ ಖರೀದಿ ಮಾಡುತ್ತಿದ್ದಾರೆ ಎಂದು ರೈತರು ದೂರುತ್ತಾರೆ.

‘ಚೀಲಗಳ ಕೊರತೆ, ಗ್ರೇಡಿಂಗ್ ಕಿರಿಕಿರಿ, ಹೆಚ್ಚುವರಿ ಸಾಗಣೆ ವೆಚ್ಚದ ಹೊರೆ, ತಡವಾಗಿ ಹಣ ಜಮೆ ಸೇರಿ ಹಲವು ಕಾರಣಗಳಿಂದ ಜಿಲ್ಲೆಯ ರೈತರು ಖರೀದಿ ಕೇಂದ್ರಗಳತ್ತ ಆಸಕ್ತಿ ತೋರುತ್ತಿಲ್ಲ. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರವು ಖರೀದಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಬೇಕು. ಖರೀದಿಸಿದ ಕೂಡಲೇ ಶೇ 25ರಷ್ಟು ಹಣವನ್ನು ರೈತರ ಖಾತೆಗೆ ಜಮೆ ಮಾಡಬೇಕು’ ಎಂದು ಒತ್ತಾಯಿಸುತ್ತಾರೆ ರೈತ ಮುಖಂಡ ಹೊನ್ನೂರು ಪ್ರಕಾಶ್‌.

ದಲ್ಲಾಳಿಗಳ ಮಾಫಿಯಾ 

(ಬೆಳಗಾವಿ ವರದಿ): ಈ ಬಾರಿ ಜಿಲ್ಲೆಯ 60,100 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. 

ಆದರೆ, ಈಗಾಗಲೇ ಶೇ 90ರಷ್ಟು ರೈತರು ಭತ್ತ ಕಟಾವು ಕೈಗೆ ಸಿಕ್ಕಷ್ಟು ದರಕ್ಕೆ ಮಾರಾಟ ಮಾಡಿದ್ದಾರೆ. ಸರ್ಕಾರ ಈಗ ಖರೀದಿ ಕೇಂದ್ರ ತೆರೆದರೆ ಪ್ರಯೋಜನವಿಲ್ಲ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಸಂಘಟನೆಯ ಅಧ್ಯಕ್ಷ ಸಿದಗೌಡ ಮೋದಗಿ ದೂರುತ್ತಾರೆ.

ಅಕ್ಟೋಬರ್‌ನಲ್ಲಿ ಬೆಂಬಲ ಬೆಲೆ ಘೋಷಿಸಬೇಕಿತ್ತು. ನವೆಂಬರ್‌ ಮೊದಲ ವಾರದಲ್ಲಿ ಖರೀದಿ ಕೇಂದ್ರ ತೆರೆಯಬೇಕಿತ್ತು. ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡಿದ್ದಾರೆ‌ ಎಂಬುದು ಅವರ ಆರೋಪ. 

ಪ್ರತಿ ವರ್ಷ ಯಾವುದೇ ಫಸಲು ರೈತರ ಕೈಗೆ ಬಂದಾಗ ಬೆಲೆ ಕುಸಿಯುವಂತೆ ಮಾಡುತ್ತಾರೆ. ಇದೊಂದು ಮಾಫಿಯಾ. ದಲ್ಲಾಳಿಗಳು ರೈತರಿಂದ ಕಡಿಮೆ ದರಕ್ಕೆ ಖರೀದಿಸಲು ಈ ರೀತಿ ಮಾಡುತ್ತಾರೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.