ADVERTISEMENT

ಪರಿಸರಕ್ಕೆ ಹಾನಿ: ಯುಪಿಸಿಎಲ್‌ಗೆ ದಂಡ

₹ 5 ಕೋಟಿ ಪಾವತಿಸಲು ರಾಷ್ಟ್ರೀಯ ಹಸಿರು ಪೀಠ ಆದೇಶ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 20:06 IST
Last Updated 15 ಮಾರ್ಚ್ 2019, 20:06 IST

ಉಡುಪಿ: ತಾಲ್ಲೂಕಿನ ಯಲ್ಲೂರು ಗ್ರಾಮದಲ್ಲಿ ಅದಾನಿ ಯುಪಿಸಿಎಲ್‌ ಪವರ್‌ ಪ್ಲ್ಯಾಂಟ್‌ ಪ್ರಾಜೆಕ್ಟ್‌ಗೆ ನೀಡಲಾಗಿದ್ದ ಪರಿಸರ ಅನುಮತಿ ಅಕ್ರಮ ಎಂದು ರಾಷ್ಟ್ರೀಯ ಹಸಿರು ಪೀಠ ಆದೇಶ ನೀಡಿದೆ ಎಂದು ಜನಜಾಗೃತಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

2,800 ಮೆಗಾವಾಟ್‌ ಸಾಮರ್ಥ್ಯದ ಉಷ್ಣ ವಿದ್ಯುತ್ ಉತ್ಪಾದನಾ ಘಟಕವನ್ನು ವಿಸ್ತರಣೆ ಮಾಡಲು ಯುಪಿಸಿಎಲ್‌ ಕಂಪನಿಗೆ ಆಗಸ್ಟ್‌ 1, 2017ರಲ್ಲಿ ನೀಡಿದ್ದ ಪರಿಸರ ಅನುಮತಿಯನ್ನೂ ನ್ಯಾಯಾಲಯ ಅಮಾನತಿನಲ್ಲಿಟ್ಟಿದೆ. ಜತೆಗೆ, ಪರಿಸರದ ಮೇಲಾಗಿರುವ ಹಾನಿ ಅರಿಯಲು ಹಿರಿಯ ವಿಜ್ಞಾನಿಗಳ ಹಾಗೂ ತಜ್ಞರ ಸಮಿತಿ ರಚಿಸುವಂತೆ ನಿರ್ದೇಶಿಸಿದೆ ಎಂದು ಅವರು ತಿಳಿಸಿದ್ದಾರೆ.

‘ಪರಿಸರಕ್ಕೆ ಹಾನಿ ಮಾಡಿದವರೇ ಬೆಲೆ ತೆರಬೇಕು’ ಎಂಬ ನಿಯಮದಡಿ ಕಂಪನಿಯು ಮಧ್ಯಂತರವಾಗಿ ₹ 5 ಕೋಟಿ ಪರಿಸರ ಪರಿಹಾರವನ್ನು ಸಿಬಿಸಿಬಿ ಸಂಸ್ಥೆಗೆ ಪಾವತಿಸಬೇಕು. ಪರಿಸರದ ಮೇಲಾಗಿರುವ ಹಾನಿಯನ್ನು ಅಧ್ಯಯನ ಮಾಡಿ ತಜ್ಞರ ಸಮಿತಿ ವರದಿ
ಸಲ್ಲಿಸಲು ನಿರ್ದೇಶನ ನೀಡಿದೆ ಎಂದು ತಿಳಿಸಿದ್ದಾರೆ.

ADVERTISEMENT

ಯಪಿಸಿಎಲ್‌ ಬಳಿ ಇರುವ ಸ್ಥಳೀಯರ ಹಾಗೂ ಅರ್ಜಿದಾರರ ಕಳವಳಗಳಿಗೆ ರಾಜ್ಯ ಸರ್ಕಾರ ಸೇರಿದಂತೆ ಯಾರೂ ಗಮನ ನೀಡಿಲ್ಲವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.