ADVERTISEMENT

ಎರಡೇ ವರ್ಷಗಳಲ್ಲಿ ನಿಷ್ಪ್ರಯೋಜಕಗೊಳ್ಳುತ್ತಿವೆ ಹೊಸ ನೋಟುಗಳು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 9:04 IST
Last Updated 29 ನವೆಂಬರ್ 2018, 9:04 IST
₹200ರ ಮುಖಬೆಲೆಯ ನೋಟುಗಳು
₹200ರ ಮುಖಬೆಲೆಯ ನೋಟುಗಳು   

ನವದೆಹಲಿ: ನೋಟು ರದ್ದತಿ ನಂತರ ಪರಿಚಯಿಸಲಾದ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ನೋಟುಗಳು ಬಹುಬೇಗನೇ ‘ನಿಷ್ಪ್ರಯೋಜಕ’ವಾಗುತ್ತಿವೆ ಎಂದು ಎಕನಾಮಿಕ್ಸ್‌ ಟೈಮ್ಸ್‌ ವರದಿ ಮಾಡಿದೆ.

ಹೊಸ ಮುಖಬೆಲೆಯ ನೋಟುಗಳ ಮುದ್ರಣಕ್ಕೆ ಬಳಸಲಾಗುತ್ತಿರುವಪೇಪರ್‌ನ ಗುಣಮಟ್ಟ ಹಳೆಯ ನೋಟುಗಳಿಗೆ ಬಳಸುತ್ತಿದ್ದ ಪೇಪರ್‌ ಗುಣಮಟ್ಟಕ್ಕಿಂತ ಕಳಪೆಯಾಗಿರುವುದೇ ಇದಕ್ಕೆ ಕಾರಣ ಎಂದುಹಿಂದಿ ಪತ್ರಿಕೆ ‘ಅಮರ್‌ ಉಜಾಲ’ ತನ್ನವರದಿಯಲ್ಲಿ ಉಲ್ಲೇಖಿಸಿದೆ.

ಎಟಿಎಂನಲ್ಲಿರುವ ಸೆನ್ಸಾರ್‌ಗಳು ಕಳಪೆ ಗುಣಮಟ್ಟದ ನೋಟುಗಳನ್ನು ಪತ್ತೆ ಹಚ್ಚುವುದಿಲ್ಲವಾದ್ದರಿಂದ, ಹಾಳಾದ ನೋಟುಗಳನ್ನು ಎಟಿಎಂಗಳಲ್ಲಿಯೂ ಬಳಸಲು ಸಾಧ್ಯವಾಗುತ್ತಿಲ್ಲ.ಮತ್ತೊಂದು ವರದಿಯ ಪ್ರಕಾರ, ₹2000 ಮತ್ತು ₹500ರ ಮುಖಬೆಲೆಯ ನೋಟುಗಳನ್ನು ಹೊರತುಪಡಿಸಿ, 2018ರಲ್ಲಿ ಪರಿಚಯಿಸಲಾಗಿದ್ದ ಹೊಸ ₹10ರ ನೋಟು ಸಹ ಬಳಸಲು ಸಾಧ್ಯವಾಗದಂತಾಗಿದೆ. ಅಲ್ಲದೆ, ಬ್ಯಾಂಕ್‌ಗಳು ಇಂತಹ ನೋಟುಗಳನ್ನು ವರ್ಗೀಕರಿಸಿ ವಿತರಿಸಲಾಗದ ಪಟ್ಟಿಗೆ ಸೇರಿಸುವ ಕೆಲಸವನ್ನು ಪ್ರಾರಂಭಿಸಿವೆ.

ADVERTISEMENT

ನೋಟುಗಳನ್ನು ಮುದ್ರಿಸಲು ಬಳಸುತ್ತಿರುವ ಪೇಪರ್‌ ಗುಣಮಟ್ಟ ಸರಿಯಿಲ್ಲ ಎನ್ನುವುದನ್ನು ಅಲ್ಲಗಳೆದಿರುವ ಸರ್ಕಾರ, ‘ನೋಟು ನಕಲುಗೊಳ್ಳುವುದನ್ನು ತಪ್ಪಿಸಲು ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಿದ್ದೇವೆ’ ಎಂದು ಸಮರ್ಥಿಸಿಕೊಂಡಿದೆ.

‘ನಮ್ಮ ಜನರು ನೋಟುಗಳನ್ನು ಮಡಚಿ ಅಥವಾ ಸೀರೆಯಲ್ಲಿ ಗಂಟು ಹಾಕಿಕೊಂಡು ಅಥವಾ ಪಂಚೆಯಲ್ಲಿ... ಹೀಗೆ ಹೇಗೆಂದರೆ ಹಾಗೆ ಇಟ್ಟುಕೊಳ್ಳುವುದರಿಂದ ಹೊಸ ಮುಖಬೆಲೆಯ ನೋಟುಗಳು ಬಹುಬೇಗನೇ ಹಾಳಾಗುತ್ತಿವೆ’ ಎಂದು ಹಣಕಾಸು ಸಚಿವಾಲಯದ ಬ್ಯಾಂಕಿಂಗ್‌ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಅಮರ್‌ ಉಜಾಲ ಪತ್ರಿಕೆಗೆ ಹೇಳಿದ್ದಾರೆ.

ಎಟಿಎಂ ಅಥವಾ ಚಲಾವಣೆಗೆ ಸಾಧ್ಯವಾಗದ ನೋಟುಗಳನ್ನು ಬ್ಯಾಂಕ್‌ಗಳು ಬಳಸಲು ಸಾಧ್ಯವಾಗದ ಪಟ್ಟಿಗೆ ಸೇರಿಸುತ್ತವೆ. ಕೊಳಕಾದ, ಮಣ್ಣಾದ ಅಥವಾ ನೋಟಿನ ಮೇಲೆ ಹಸ್ತಾಕ್ಷರವಿದ್ದ ನೋಟುಗಳನ್ನು ಈ ವರ್ಗಕ್ಕೆ ಸೇರಿಸಲಾಗುತ್ತದೆ. ನಂತರ ಅವುಗಳನ್ನು ಆರ್‌ಬಿಐಗೆ ವಾಪಸ್‌ ಕಳುಹಿಸಲಾಗುತ್ತದೆ.

ಹೊಸ ನೋಟುಗಳನ್ನು ‘ಬಳಸಲು ಆಗದ’ವರ್ಗಕ್ಕೆ ಸೇರಿಸುವುದನ್ನು ಆರ್‌ಬಿಐ ಈ ಹಿಂದೆ ನಿಷೇಧಿಸಿತ್ತು. ಆದರೆ, ವಾಣಿಜ್ಯ ಬ್ಯಾಂಕ್‌ಗಳು ಇದನ್ನು ತೀವ್ರವಾಗಿ ವಿರೋಧಿಸಿದ್ದರಿಂದ2018ರ ಜುಲೈನಲ್ಲಿ ಆರ್‌ಬಿಐ ನಿಷೇಧವನ್ನು ತೆರವುಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.