ADVERTISEMENT

ಏರ್‌ಪೋರ್ಟ್‌ ಲಗೇಜ್ ವ್ಯವಸ್ಥೆ ‘ಸ್ಮಾರ್ಟ್’

ಪಂಜಾಬ್‌ನ ಎಲ್‌ಪಿಯು ವಿದ್ಯಾರ್ಥಿಗಳಿಂದ ಸಂಶೋಧನೆ

ಪಿಟಿಐ
Published 24 ಜೂನ್ 2019, 19:27 IST
Last Updated 24 ಜೂನ್ 2019, 19:27 IST
baggage
baggage   

ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಲಗೇಜ್‌ಗಳು ಕಣ್ತಪ್ಪುವುದನ್ನು ತಪ್ಪಿಸಲು ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ (ಎಲ್‌ಪಿಯು) ಮೂವರು ವಿದ್ಯಾರ್ಥಿಗಳ ತಂಡ ಸ್ಮಾರ್ಟ್ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿದೆ.

ಅಲ್ಲದೆ ಪ್ರಯಾಣಿಕರು ತಮ್ಮ ಲಗೇಜ್ ಸಂಗ್ರಹಿಸಿಕೊಳ್ಳಲು ಮರೆತಿದ್ದರೆ ಅದನ್ನು ನೆನಪಿಸುವ ಸೌಲಭ್ಯವೂ ಇದರಲ್ಲಿದೆ.

‘ವಿಮಾನ ನಿಲ್ದಾಣಗಳಲ್ಲಿ ಬಳಕೆಯಲ್ಲಿರುವ ಪ್ರಯಾಣಿಕರ ಮಾಹಿತಿ ಸಂಗ್ರಹ ಹಾಗೂ ಲಾಜಿಸ್ಟಿಕ್ಸ್ ತಂತ್ರಜ್ಞಾನವನ್ನು ಬಳಸಿ ನಾವು ಈ ವ್ಯವಸ್ಥೆ ರೂಪಿಸಿದ್ದೇವೆ’ ಎಂದು ತಂಡದ ಪವನ್ ಕುಮಾರ್ ರಾಘವ್ ತಿಳಿಸಿದ್ದಾರೆ.

ADVERTISEMENT

ಎಲ್‌ಸಿಡಿಯಲ್ಲಿ ಮಾಹಿತಿ: ‘ಕನ್ವೆಯರ್ ಬೆಲ್ಟ್‌ಗಳಲ್ಲಿ ಬರುವ ಲಗೇಜ್‌ಗಳನ್ನು ಪತ್ತೆ ಮಾಡಿ ಯಾವ ವೇಳೆಗೆ ಅವು ಸಿಗುತ್ತವೆ ಎನ್ನುವ ಮಾಹಿತಿಯನ್ನು ಕನ್ವೆಯರ್ ಬೆಲ್ಟ್ ಸಮೀಪದ ಎಲ್‌ಸಿಡಿಯಲ್ಲಿ ತೋರಿಸಲಾಗುತ್ತದೆ. ಇದಕ್ಕೆ ಅನುಗುಣವಾಗಿ ಪ್ರಯಾಣಿಕರು ತಮ್ಮ ಲಗೇಜ್‌ ಪಡೆದುಕೊಳ್ಳಬಹುದು. ನಿರ್ಗಮನ ದ್ವಾರಗಳ ಬಳಿ ಅಳವಡಿಸಲಾದ, ಸ್ಮಾರ್ಟ್ ವ್ಯವಸ್ಥೆ ಆಯಾ ಲಗೇಜ್‌ಗಳ ಮಾಲೀಕರೇ ಅವುಗಳನ್ನು ಪಡೆದುಕೊಂಡಿದ್ದಾರೆಯೇ ಎನ್ನುವುದನ್ನು ಪರಿಶೀಲಿಸುತ್ತದೆ. ಲಗೇಜ್‌ಗಳು ಹಾಗೂ ಅವುಗಳ ಮಾಲೀಕರ ಮಾಹಿತಿ ತಾಳೆಯಾದರೆ ಮಾತ್ರ ನಿರ್ಗಮನ ದ್ವಾರ ತೆರೆದುಕೊಳ್ಳುತ್ತದೆ’ ಎಂದು ರಾಘವ್ ವ್ಯವಸ್ಥೆ ಕುರಿತು ವಿವರ ನೀಡಿದ್ದಾರೆ.

ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದ ಬಿ.ಟೆಕ್ ವಿದ್ಯಾರ್ಥಿಗಳಾದ ರಾಘವ್, ವಿಕಾಸ್ ಸಿಂಗ್ ಹಾಗೂ ದೀಪಕ್ ಸಿಂಗ್ ಬಿಷ್ಟ್ ಈ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ.

‘ಲಗೇಜ್‌ಗಳು ಎಲ್ಲಿವೆ ಎಂದು ಪತ್ತೆ ಮಾಡಲು ವಿಮಾನ ನಿಲ್ದಾಣಗಳಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ. ಇದರಿಂದಾಗಿ ಪ್ರಯಾಣಿಕರು ತಮ್ಮ ಲಗೇಜ್‌ ಸಂಗ್ರಹಿಸಿಕೊಳ್ಳಲು ಉದ್ದುದ್ದ ಸಾಲಿನಲ್ಲಿ ನಿಂತು ಕಾಯಬೇಕಾಗುತ್ತದೆ. ಇದನ್ನು ತಪ್ಪಿಸುವುದು ನಮ್ಮ ಉದ್ದೇಶ’ ಎಂದು ತಂಡ ಹೇಳಿಕೊಂಡಿದೆ.

ಲಗೇಜ್ ಸಂಗ್ರಹಕ್ಕೆ ಕಟ್ಟುನಿಟ್ಟಿನ ನಿಯಮಗಳಿದ್ದರೂ ಸಹ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿಲ್ಲ. ಬಹುತೇಕ ವಿಮಾನ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಇದ್ದರೂ ಸಹ, ಪ್ರಯಾಣಿಕರು ತಮ್ಮ ಲಗೇಜ್ ಕಳೆದುಕೊಳ್ಳುವ ಪ್ರಸಂಗಗಳು ಸರ್ವೇಸಾಮಾನ್ಯವಾಗಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಎನ್‌ಆರ್‌ಡಿಸಿಗೆ ಆಯ್ಕೆ

‘ಸಂಶೋಧನೆಗೆ ಪೇಟೆಂಟ್‌ ಪಡೆಯಲು ಅರ್ಜಿ ಸಲ್ಲಿಸಲಾಗಿದೆ. ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ನಿಗಮ (ಎನ್‌ಆರ್‌ಡಿಸಿ) ಈ ಯೋಜನೆಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಆಯ್ಕೆ ಮಾಡಿಕೊಂಡಿದೆ. ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಲು ಸಣ್ಣ ಮಟ್ಟದಲ್ಲಿ ಪ್ರಾಯೋಗಿಕ ಪರೀಕ್ಷೆ ಮಾಡಲಾಗಿದೆ’ ಎಂದು ರಾಘವ್ ಹೇಳಿದ್ದಾರೆ.

ದಾರಿತಪ್ಪುವ ಲಗೇಜ್‌ಗಳು

‘ವಿಶ್ವದಾದ್ಯಂತ ಪ್ರತಿ ನಿಮಿಷಕ್ಕೆ 40 ಲಗೇಜ್‌ಗಳು ಮಾಲೀಕರ ಕೈತಪ್ಪಿಹೋಗುತ್ತವೆ. 2018ರಲ್ಲಿ 2.48 ಕೋಟಿ ಲಗೇಜ್‌ಗಳು ಈ ರೀತಿ ಕಳೆದು ಹೋಗಿವೆ’ ಎಂದು ವೈಮಾನಿಕ ಐಟಿ ಸಂಸ್ಥೆ ಎಸ್‌ಐಟಿಎ ತನ್ನ ವರದಿಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.