
ನವದೆಹಲಿ: ಇ–ವಾಣಿಜ್ಯ ಕ್ಷೇತ್ರದ 26 ಪ್ರಮುಖ ಕಂಪನಿಗಳು ತಾವು ಗ್ರಾಹಕರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡುತ್ತಿಲ್ಲ, ನ್ಯಾಯಸಮ್ಮತವಲ್ಲದ ವ್ಯಾಪಾರ ಪದ್ಧತಿಗಳನ್ನು ಅನುಸರಿಸುತ್ತಿಲ್ಲ ಎಂಬುದಾಗಿ ಮುಚ್ಚಳಿಕೆ ನೀಡಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಹೀಗೆ ಮುಚ್ಚಳಿಕೆ ನೀಡಿರುವ ಕಂಪನಿಗಳ ಪಟ್ಟಿಯಲ್ಲಿ ಜೆಪ್ಟೊ, ಬಿಗ್‌ಬಾಸ್ಕೆಟ್, ಸ್ವಿಗ್ಗಿ, ಜಿಯೊಮಾರ್ಟ್, ಜೊಮಾಟೊ ಪ್ರಮುಖವಾಗಿವೆ. ಇ–ವಾಣಿಜ್ಯ ವೇದಿಕೆಗಳು ನ್ಯಾಯಸಮ್ಮತವಲ್ಲದ ಇಂತಹ ಕ್ರಮಗಳನ್ನು ಆಶ್ರಯಿಸಿವೆಯೇ ಎಂಬ ಬಗ್ಗೆ ಕೇಂದ್ರ ಸರ್ಕಾರವು ನಿಗಾ ಇರಿಸಿದೆ.
26 ಕಂಪನಿಗಳು ಸ್ವ–ಇಚ್ಛೆಯಿಂದ ಮುಚ್ಚಳಿಕೆ ನೀಡಿವೆ. ಗ್ರಾಹಕರನ್ನು ತಪ್ಪುದಾರಿಗೆ ಎಳೆಯುವಂತಹ ಪದ್ಧತಿಗಳನ್ನು (ಡಾರ್ಕ್ ಪ್ಯಾಟರ್ನ್) ತಡೆಯಲು ಜಾರಿಗೆ ತಂದಿರುವ ನಿಯಮಗಳಿಗೆ ಬದ್ಧವಾಗಿ ತಾವು ನಡೆದುಕೊಳ್ಳುವುದಾಗಿ ಈ ಕಂಪನಿಗಳು ಹೇಳಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ತಿಳಿಸಿದೆ.
ಕಂಪನಿಗಳು ತಾವಾಗಿಯೇ ಮುಚ್ಚಳಿಕೆ ನೀಡಿರುವುದು ಡಿಜಿಟಲ್ ಮಾರುಕಟ್ಟೆಯಲ್ಲಿ ಗ್ರಾಹಕರ ಹಿತವನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ಇಲಾಖೆ ಹೇಳಿದೆ.
ಈ 26 ಕಂಪನಿಗಳು ಆಂತರಿಕ ಪರಿಶೀಲನೆಯೊಂದನ್ನು ನಡೆಸಿವೆ, ಡಾರ್ಕ್ ಪ್ಯಾಟರ್ನ್ ಅಂಶಗಳು ತಮ್ಮಲ್ಲಿವೆಯೇ ಎಂಬುದನ್ನು ಪರಿಶೀಲಿಸಿ, ಅವು ಇದ್ದರೆ ಅವುಗಳನ್ನು ನಿರ್ಮೂಲಗೊಳಿಸಿವೆ ಎಂದು ಇಲಾಖೆಯ ಹೇಳಿಕೆಯು ತಿಳಿಸಿದೆ.
ಈ ಬಗೆಯಲ್ಲಿ ಮುಚ್ಚಳಿಕೆಯನ್ನು ಕೆಲವು ಕಂಪನಿಗಳು ನೀಡಿರುವುದು, ಇತರ ಕಂಪನಿಗಳಿಗೂ ಅದೇ ಮಾರ್ಗ ಅನುಸರಿಸಲು ಪ್ರೇರಣೆ ಆಗುತ್ತದೆ ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಹೇಳಿದೆ.
ತಮ್ಮಲ್ಲಿ ಯಾವುದಾದರೂ ಡಾರ್ಕ್ ಪ್ಯಾಟರ್ನ್‌ಗಳು ಇವೆಯೇ ಎಂಬ ಬಗ್ಗೆ ಇ–ವಾಣಿಜ್ಯ ವೇದಿಕೆಗಳು ಪರಿಶೀಲನೆ ನಡೆಸಬೇಕು, ಇದ್ದಲ್ಲಿ ಅವುಗಳನ್ನು ನಿವಾರಿಸಬೇಕು ಎಂದು ಸಿಸಿಪಿಎ ಜೂನ್‌ನಲ್ಲಿ ಸಲಹೆ ನೀಡಿತ್ತು.
ಡಾರ್ಕ್ ಪ್ಯಾಟರ್ನ್‌ಗಳನ್ನು ಗುರುತಿಸಿ ಅವುಗಳ ಬಗ್ಗೆ ವರದಿ ಮಾಡಬೇಕು ಎಂದು ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ ಎಂದು ಇಲಾಖೆ ಹೇಳಿದೆ. ಗ್ರಾಹಕರು ನೀಡುವ ದೂರುಗಳನ್ನು ವ್ಯವಸ್ಥಿತವಾಗಿ ಇತ್ಯರ್ಥಪಡಿಸಲಾಗುತ್ತದೆ ಹಾಗೂ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
ಡಾರ್ಕ್ ಪ್ಯಾಟರ್ನ್ ಎಂದರೇನು?
ಇ–ವಾಣಿಜ್ಯ ವೇದಿಕೆಗಳು ಗ್ರಾಹಕರ ಕಣ್ಣಿಗೆ ಮಣ್ಣೆರಚಲು ಅನುಸರಿಸುವ ಹಲವು ತಂತ್ರಗಳನ್ನು ಒಗ್ಗೂಡಿಸಿ ಡಾರ್ಕ್ ಪ್ಯಾಟರ್ನ್ ಎನ್ನಲಾಗುತ್ತದೆ. ಇಂತಹ ತಂತ್ರಗಳ ಮೂಲಕ ಕೆಲವು ಇ–ವಾಣಿಜ್ಯ ವೇದಿಕೆಗಳು ಗ್ರಾಹಕರು ತಮ್ಮ ಹಿತಾಸಕ್ತಿಗೆ ಪೂರಕವಲ್ಲದ ತೀರ್ಮಾನವನ್ನು ತಾವೇ ತೆಗೆದುಕೊಳ್ಳುವಂತೆ ಮಾಡುತ್ತವೆ. ಉತ್ಪನ್ನದ ಬೆಲೆಯನ್ನು ಆರಂಭದಲ್ಲಿ ಕಡಿಮೆ ತೋರಿಸಿ ಪಾವತಿ ಸಂದರ್ಭದಲ್ಲಿ ತೆರಿಗೆ ಮತ್ತಿತರ ಅಂಶಗಳನ್ನು ಸೇರಿಸಿ ಹೆಚ್ಚು ಬೆಲೆ ತೋರಿಸುವುದು; ಕಡಿಮೆ ಬೆಲೆಯ ಉತ್ಪನ್ನವೊಂದನ್ನು ಜಾಹೀರಾತಿನಲ್ಲಿ ತೋರಿಸಿ ಗ್ರಾಹಕ ಅದನ್ನು ಖರೀದಿಸಲು ಬಯಸಿದಾಗ ಆ ಉತ್ಪನ್ನ ಲಭ್ಯವಿಲ್ಲವೆಂದು ಹೇಳಿ ಅದೇ ಬಗೆಯ ದುಬಾರಿ ಬೆಲೆಯ ಉತ್ಪನ್ನ ಖರೀದಿಸಲು ಒತ್ತಾಯಿಸುವುದು; ಉತ್ಪನ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ ಹೀಗಾಗಿ ಅವುಗಳನ್ನು ಬೇಗನೆ ಖರೀದಿಸಬೇಕು ಎಂದು ಹೇಳಿ ಗ್ರಾಹಕರಲ್ಲಿ ಅನಗತ್ಯ ಆತುರ ಮೂಡುವಂತೆ ಮಾಡುವುದು... ಇವೆಲ್ಲ ಡಾರ್ಕ್ ಪ್ಯಾಟರ್ನ್‌ನ ಭಾಗ.
ಪ್ರಮುಖ ಡಾರ್ಕ್ ಪ್ಯಾಟರ್ನ್‌ಗಳು ಹೇಗಿರುತ್ತವೆ?
2023ರ ನವೆಂಬರ್‌ನಲ್ಲಿ ಅಧಿಸೂಚನೆಯಲ್ಲಿ ಪ್ರಕಟಿಸಲಾದ ಡಾರ್ಕ್ ಪ್ಯಾಟರ್ನ್‌ಗಳ ತಡೆ ಮತ್ತು ನಿಯಂತ್ರಣ ಮಾರ್ಗಸೂಚಿಗಳು 13 ಬಗೆಯ ಡಾರ್ಕ್ ಪ್ಯಾಟರ್ನ್‌ಗಳನ್ನು ಗುರುತಿಸಿ ನಿರ್ಬಂಧಿಸಿವೆ. ಅವುಗಳಲ್ಲಿ ಕೆಲವು ಹೀಗಿವೆ
* ಉತ್ಪನ್ನಗಳ ಸಂಗ್ರಹ ಹೆಚ್ಚಿಲ್ಲ ಎಂದು ಹೇಳಿ ಅವುಗಳನ್ನು ಬೇಗನೆ ಖರೀದಿಸಬೇಕು ಎಂಬ ಆತುರವನ್ನು ಗ್ರಾಹಕರಲ್ಲಿ ವಿನಾಕಾರಣ ಮೂಡಿಸುವುದು
* ಗ್ರಾಹಕರ ಒಪ್ಪಿಗೆ ಇಲ್ಲದೆಯೇ ಅವರ ಖರೀದಿ ಬುಟ್ಟಿಗೆ ಹೆಚ್ಚುವರಿ ಉತ್ಪನ್ನಗಳನ್ನು ಸೇರಿಸುವುದು
* ನಿರ್ದಿಷ್ಟ ಉತ್ಪನ್ನವೊಂದನ್ನು ಖರೀದಿಸದೆ ಇರುವುದೇ ತಪ್ಪು ಎನ್ನುವ ಭಾವವನ್ನು ಗ್ರಾಹಕರಲ್ಲಿ ಮೂಡಿಸಲು ಯತ್ನಿಸುವುದು
* ಗ್ರಾಹಕರು ನಿರ್ದಿಷ್ಟ ಬಗೆಯ ತೀರ್ಮಾನವೊಂದನ್ನು ತೆಗೆದುಕೊಳ್ಳುವಂತೆ ಅವರ ಮೇಲೆ ಒತ್ತಡ ತರುವುದು
* ಕಡಿಮೆ ವೆಚ್ಚದ ಅಥವಾ ಉಚಿತವಾದ ಆರಂಭಿಕ ಚಂದಾದಾರಿಕೆಯ ಅವಧಿ ಮುಗಿದ ನಂತರ ಚಂದಾದಾರಿಕೆ ರದ್ದುಮಾಡುವುದನ್ನು ಬಹಳ ಕಷ್ಟದ ಪ್ರಕ್ರಿಯೆಯನ್ನಾಗಿಸುವುದು
ಇವು ಕೂಡ ತಮ್ಮಲ್ಲಿ ಡಾರ್ಕ್ ಪ್ಯಾಟರ್ನ್ ಇಲ್ಲ ಎಂದಿವೆ
ಫಾರ್ಮ್ ಈಸಿ ಫ್ಲಿಪ್‌ಕಾರ್ಟ್ ಮಿಂತ್ರಾ ವಾಲ್‌ಮಾರ್ಟ್ ಮೇಕ್‌ಮೈಟ್ರಿಪ್ ಪೇಜ್ ಇಂಡಸ್ಟ್ರೀಸ್ ವಿಲಿಯಂ ಪೆನ್ ಕ್ಲಿಯರ್‌ಟ್ರಿಪ್ ರಿಲಯನ್ಸ್ ಜುವೆಲ್ಸ್ ರಿಲಯನ್ಸ್ ಡಿಜಿಟಲ್ ನೆಟ್‌ಮೆಡ್ಸ್ ಟಾಟಾ 1 ಎಂಜಿ ಮೀಶೊ ಇಕ್ಸಿಗೊ ಮಿಲ್‌ಬಾಸ್ಕೆಟ್ ಹ್ಯಾಮ್ಲೀಸ್ ಅಜಿಯೊ ಟಿರಾ ಬ್ಯೂಟಿ ಡ್ಯೂರೊಫ್ಲೆಕ್ಸ್ ಕ್ಯುರಾಡೆನ್ ಇಂಡಿಯಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.