
ಎನ್‌ಪಿಎಸ್
ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್‌ಪಿಎಸ್) ನಿಯಮಗಳನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಪರಿಷ್ಕರಿಸಿದ್ದು, ಎನ್‌ಪಿಎಸ್ ಖಾತೆಯನ್ನು ಅಡಮಾನವಾಗಿ ಇರಿಸಿ ಸಾಲ ಪಡೆಯುವ ಸೌಲಭ್ಯ ಕಲ್ಪಿಸಿದೆ.
ಪಿಎಫ್‌ಆರ್‌ಡಿಎ ನಿಗದಿಪಡಿಸಿದ ಮಿತಿಯ ಒಳಗೆ, ನಿಯಂತ್ರಣಕ್ಕೆ ಒಳಪಟ್ಟ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬಹುದು ಎಂದು ಡಿಸೆಂಬರ್ 12ರ ‘ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ನಿಯಮಗಳು – 2025’ರಲ್ಲಿ ಹೇಳಲಾಗಿದೆ.
ಸರ್ಕಾರೇತರ ಚಂದಾದಾರರು ಎನ್‌ಪಿಎಸ್ ವ್ಯವಸ್ಥೆಯಿಂದ ಹೊರನಡೆಯುವ ಸಂದರ್ಭದಲ್ಲಿ ಖಾತೆಯಲ್ಲಿನ ಶೇಕಡ 80ರವರೆಗಿನ ಮೊತ್ತವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಶೇ 60ರವರೆಗಿನ ಮೊತ್ತವನ್ನು ಮಾತ್ರ ಹಿಂಪಡೆಯಲು ಅವಕಾಶ ಇತ್ತು. ಇನ್ನುಳಿದ ಶೇ 40ರಷ್ಟು ಮೊತ್ತವನ್ನು ಆ್ಯನ್ಯುಟಿ ಯೋಜನೆ ಖರೀದಿಸಲು ಬಳಸಬೇಕಿತ್ತು.
ಹೊಸ ನಿಯಮಗಳು ಅವು ಅಧಿಸೂಚನೆಯಲ್ಲಿ ಪ್ರಕಟವಾದ ದಿನದಿಂದ ಜಾರಿಗೆ ಬರಲಿವೆ.
ಪಿಂಚಣಿ ನಿಧಿಯಲ್ಲಿ ಒಗ್ಗೂಡಿರುವ ಮೊತ್ತವು ₹8 ಲಕ್ಷಕ್ಕಿಂತ ಕಡಿಮೆ ಇದ್ದರೆ, ಅಷ್ಟೂ ಮೊತ್ತವನ್ನು ಒಂದೇ ಬಾರಿಗೆ ಹಿಂಪಡೆಯುವ ಅವಕಾಶ ಇರುತ್ತದೆ. ಅಥವಾ, ಆ ಮೊತ್ತವನ್ನು ಕಾಲಕಾಲಕ್ಕೆ ವ್ಯವಸ್ಥಿತ ಹಿಂತೆಗೆತದ ಮೂಲಕ ಪಡೆಯಲು ಕೂಡ ಅವಕಾಶ ಇರಲಿದೆ.
ಎನ್‌ಪಿಎಸ್ ಮೊತ್ತವನ್ನು ಇನ್ನು ಮುಂದೆ ಒಟ್ಟು ನಾಲ್ಕು ಬಾರಿ ಭಾಗಶಃ ಹಿಂಪಡೆಯಲು ಅವಕಾಶ ಇರಲಿದೆ. ಆದರೆ ಒಂದು ಬಾರಿ ಹಿಂಪಡೆದ ನಂತರ ನಾಲ್ಕು ವರ್ಷ ಮತ್ತೆ ಹಿಂಪಡೆಯಲು ಅವಕಾಶ ಸಿಗುವುದಿಲ್ಲ.
ಸರ್ಕಾರಿ ವಲಯದ ಎನ್‌ಪಿಎಸ್ ಚಂದಾದಾರರಿಗೆ 85 ವರ್ಷ ವಯಸ್ಸಾಗುವವರೆಗೂ ಎನ್‌ಪಿಎಸ್‌ನಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿದೆ. ಈ ಮೊದಲು ಇದಕ್ಕೆ 75 ವರ್ಷ ವಯಸ್ಸಿನ ಮಿತಿ ಇತ್ತು.
ರಾಜೀನಾಮೆ, ಕೆಲಸದಿಂದ ವಜಾ ಕಾರಣದಿಂದಾಗಿ ಎನ್‌ಪಿಎಸ್‌ನಿಂದ ಹೊರನಡೆಯುವ ಸರ್ಕಾರಿ ನೌಕರರು ಎನ್‌ಪಿಎಸ್‌ನಲ್ಲಿ ಶೇ 80ರಷ್ಟು ಮೊತ್ತವನ್ನು ಆ್ಯನ್ಯುಟಿ ಖರೀದಿಗೆ ಬಳಸಬೇಕು. ಇನ್ನುಳಿದ ಮೊತ್ತವನ್ನು ಅವರು ಹಿಂಪಡೆಯಬಹುದು.
ಸರ್ಕಾರೇತರ ವಿಭಾಗ ಹಾಗೂ ಎನ್‌ಪಿಎಸ್–ಲೈಟ್ ವಿಭಾಗದವರು ಕೂಡ ತಮಗೆ 85 ವರ್ಷ ವಯಸ್ಸಾಗುವವರೆಗೂ ಹೂಡಿಕೆಯನ್ನು ಮುಂದುವರಿಸಲು ಹೊಸ ನಿಯಮಗಳಲ್ಲಿ ಅವಕಾಶ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.