ADVERTISEMENT

Pahalgam Terror Attack: ಪಾಕ್‌ ಆರ್ಥಿಕತೆಗೆ ಭಾರಿ ಪೆಟ್ಟು?

ಪಿಟಿಐ
Published 25 ಏಪ್ರಿಲ್ 2025, 0:03 IST
Last Updated 25 ಏಪ್ರಿಲ್ 2025, 0:03 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ನವದೆಹಲಿ: ಪಾಕಿಸ್ತಾನ ಕೂಡ ಭಾರತದೊಟ್ಟಿಗಿನ ಎಲ್ಲಾ ವ್ಯಾಪಾರ ಒಪ್ಪಂದಗಳನ್ನು ಸ್ಥಗಿತಗೊಳಿಸಿದೆ. ಹಾಗಾಗಿ, ಅಲ್ಪ ಪ್ರಮಾಣದಲ್ಲಿ ನಡೆಯುತ್ತಿದ್ದ ಉಭಯ ದೇಶಗಳ ನಡುವಿನ ವ್ಯಾ‍ಪಾರ ವಹಿವಾಟು ಸಂಪೂರ್ಣ ಬಂದ್ ಆಗಲಿದೆ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟ (ಎಫ್‌ಐಇಒ) ಗುರುವಾರ ತಿಳಿಸಿದೆ.

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಿಂದಾಗಿ ಭಾರತವು, ಪಾಕಿಸ್ತಾನದ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಿದೆ. ಇದರಲ್ಲಿ ಅಟ್ಟಾರಿ ಗಡಿ ಬಂದ್‌ ಕೂಡ ಮಾಡಲಾಗಿದೆ. ಈ ಮಾರ್ಗದ ಮೂಲಕ ನಡೆಯುತ್ತಿದ್ದ ವ್ಯಾಪಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಹೇಳಿದೆ.

ADVERTISEMENT

‘ಆ ದೇಶದ ಜೊತೆಗಿನ ಭಾರತದ ದ್ವಿಪಕ್ಷೀಯ ವ್ಯಾಪಾರ ವಹಿವಾಟು ತೀರಾ ಕಡಿಮೆ. ದೇಶದ ಒಟ್ಟು ವ್ಯಾಪಾರದ ಶೇ 0.06ರಷ್ಟಿದೆ’ ಎಂದು ಎಫ್‌ಐಇಒ ಅಧ್ಯಕ್ಷ ಎಸ್‌.ಸಿ. ರಾಲ್ಹಾನ್ ಅವರು, ಪಿಟಿಐಗೆ ತಿಳಿಸಿದ್ದಾರೆ.

‘2024–25ನೇ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜನವರಿವರೆಗೆ ಭಾರತದ ಒಟ್ಟು ರಫ್ತು ವ್ಯಾಪಾರ ಮೌಲ್ಯ ₹68.27 ಲಕ್ಷ ಕೋಟಿ ಆಗಿದೆ. ಇದೇ ಅವಧಿಯಲ್ಲಿ ಪಾಕಿಸ್ತಾನಕ್ಕೆ ₹3,820 ಕೋಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ. ವ್ಯಾ‍ಪಾರ ಸಂಪೂರ್ಣ ಸ್ಥಗಿತಗೊಳ್ಳು ವುದರಿಂದ ಆ ದೇಶದ ಆರ್ಥಿಕತೆ ಮೇಲೆ ಹೆಚ್ಚು ಪರಿಣಾಮ ಬೀರಲಿದೆ’ ಎಂದು ಹೇಳಿದ್ದಾರೆ.  ಇದೇ ಅವಧಿಯಲ್ಲಿ ಭಾರತಕ್ಕೆ ಅಲ್ಲಿಂದ ₹3.58 ಕೋಟಿ ಮೌಲ್ಯದ ಸರಕುಗಳು ಆಮದಾಗಿವೆ ಎಂದು ತಿಳಿಸಿದ್ದಾರೆ.

2023–24ರಲ್ಲಿ ಭಾರತವು ₹10 ಸಾವಿರ ‌ಕೋಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡಿದ್ದರೆ, ₹24.57 ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಭಾರತದಿಂದ ದುಬೈ ಬಂದರಿನ ಮೂಲಕ ಪಾಕಿಸ್ತಾನಕ್ಕೆ ಹೆಚ್ಚಾಗಿ ಉತ್ಪನ್ನಗಳು ರವಾನೆಯಾಗುತ್ತವೆ.

ಶೇ 200ರಷ್ಟು ಸುಂಕ

ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುವ ತಾಜಾ ಹಣ್ಣು, ಸಿಮೆಂಟ್‌, ಪೆಟ್ರೋಲಿಯಂ ಉತ್ಪನ್ನ ಮತ್ತು ಖನಿಜ ಅದಿರಿನ ಮೇಲೆ ಭಾರತವು ಶೇ 200ರಷ್ಟು ಸುಂಕ ವಿಧಿಸುತ್ತದೆ. 2017–18ರಲ್ಲಿ ಆ ದೇಶವು ಭಾರತಕ್ಕೆ ₹4,170 ಕೋಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡಿತ್ತು.

1996ರಲ್ಲಿ ಭಾರತವು ಆ ದೇಶಕ್ಕೆ ಪರಮಾಪ್ತ ರಾಷ್ಟ್ರದ ಸ್ಥಾನಮಾನ ನೀಡಿತ್ತು. ಆದರೆ, ಇದನ್ನು ಅದು ಉಳಿಸಿಕೊಳ್ಳಲಿಲ್ಲ. ಹಾಗಾಗಿ, ಈ ಪಟ್ಟಿಯಿಂದ ಕೈಬಿಟ್ಟಿದೆ.

2012ರಲ್ಲಿ ಪಾಕಿಸ್ತಾನವು ಭಾರತಕ್ಕೆ ಪರಮಾಪ್ತ ರಾಷ್ಟ್ರ ಸ್ಥಾನಮಾನ ಘೋಷಿಸಿತ್ತು. ಆದರೆ, ಅಲ್ಲಿನ ವಿಪಕ್ಷಗಳ ತೀವ್ರ ವಿರೋಧದಿಂದ ಈ ಘೋಷಣೆಯನ್ನು ಹಿಂಪಡೆಯಿತು.

ಯಾವ ಉತ್ಪನ್ನ ರವಾನೆ?

2024–25ನೇ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜನವರಿವರೆಗೆ ದೇಶದಿಂದ ರಾಸಾಯನಿಕಗಳು ಮತ್ತು ಔಷಧ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಾಕಿಸ್ತಾನಕ್ಕೆ ರಫ್ತು ಮಾಡಲಾಗಿದೆ. ಒಟ್ಟು ರಫ್ತಿನ ಪೈಕಿ ಇವುಗಳ ಪಾಲು ಶೇ 60ರಷ್ಟಿದೆ.

ಸಕ್ಕರೆ ಮತ್ತು ಸಕ್ಕರೆ ಮಿಠಾಯಿ, ತರಕಾರಿ, ಕಾಫಿ, ಟೀ, ಸಂಬಾರ ಪದಾರ್ಥ, ದ್ವಿದಳ ಧಾನ್ಯ, ಪೆಟ್ರೋಲಿಯಂ ಉತ್ಪನ್ನ, ರಸಗೊಬ್ಬರ, ಪ್ಲಾಸ್ಟಿಕ್‌, ರಬ್ಬರ್‌, ಆಟೊ ಬಿಡಿಭಾಗ, ಸೋಯಾಬೀನ್‌, ಕುಕ್ಕುಟ ಆಹಾರವನ್ನು ಪ್ರಮುಖವಾಗಿ ರಫ್ತು ಮಾಡಲಾಗುತ್ತದೆ. 

ಅಲ್ಲಿಂದ ಪ್ರಮುಖವಾಗಿ ತಾಜಾ ಹಣ್ಣುಗಳು, ಒಣ ಹಣ್ಣುಗಳು, ಒಣ ಖರ್ಜೂರ, ಎಣ್ಣೆ ಬೀಜಗಳು, ಸಿಮೆಂಟ್, ಗಿಡಮೂಲಿಕೆ ಸಸ್ಯಗಳು, ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.