ಇಂಡಿಗೊ
(ಚಿತ್ರ ಕೃಪೆ: ಇಂಡಿಗೊ)
ನವೆದಹಲಿ/ಮುಂಬೈ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಸಶಸ್ತ್ರ ಪಡೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ದೇಶದ ವಾಯುಯಾನದಲ್ಲಿ ಭಾರಿ ವ್ಯತ್ಯಯ ಕಂಡುಬಂದಿದೆ.
200ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದ್ದು, ಶ್ರೀನಗರ ಸೇರಿದಂತೆ 18 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಏರ್ ಇಂಡಿಯಾ, ಇಂಡಿಗೊ, ಸ್ಪೈಸ್‌ಜೆಟ್, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಆಕಾಶ್ ಏರ್ ಮತ್ತು ಕೆಲವು ವಿದೇಶಿ ವಿಮಾನಯಾನ ಸಂಸ್ಥೆಗಳ ಹಾರಾಟ ರದ್ದುಗೊಂಡಿವೆ.
ಈ ಪೈಕಿ ಇಂಡಿಗೊ 160 ವಿಮಾನಗಳ ಸೇವೆಯನ್ನು ರದ್ದುಗೊಳಿಸಿದೆ.
ಮೂಲಗಳ ಪ್ರಕಾರ ದೇಶದ ಉತ್ತರ ಹಾಗೂ ಪಶ್ಚಿಮ ಭಾಗಗಳಲ್ಲಿ ಕನಿಷ್ಠ 18 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ವಿಮಾನ ನಿಲ್ದಾಣಗಳಲ್ಲಿ ಶ್ರೀನಗರ, ಲೇಹ್, ಜಮ್ಮು, ಅಮೃತಸರ, ಪಠಾಣ್‌ಕೋಟ್, ಚಂಡೀಗಢ, ಜೋಧ್‌ಪುರ, ಜೈಸಲ್ಮೇರ್, ಶಿಮ್ಲಾ, ಧರ್ಮಶಾಲಾ ಮತ್ತು ಜಾಮ್‌ನಗರ ಸೇರಿವೆ.
ಏತನ್ಮಧ್ಯೆ ದಾಳಿ ಬೆನ್ನಲ್ಲೇ ಶ್ರೀನಗರದ ವಿಮಾನ ನಿಲ್ದಾಣ ಸಂಪೂರ್ಣ ನಿಯಂತ್ರಣವನ್ನು ಸೇನೆ ಪಡೆದುಕೊಂಡಿದೆ.
ರಾಷ್ಟ್ರ ರಾಜಧಾನಿ ದೆಹಲಿ ವಿಮಾನ ನಿಲ್ದಾಣದಿಂದಲೂ ವಿಮಾನಗಳ ಹಾರಾಟದಲ್ಲೂ ವ್ಯತ್ಯಯ ಉಂಟಾಗಿದ್ದು, ಕನಿಷ್ಠ 35 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಪಹಲ್ಗಾಮ್‌ನಲ್ಲಿ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆ ಉಗ್ರರ ಒಂಬತ್ತು ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯನ್ನು ನಡೆಸಿದೆ. s
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.