ADVERTISEMENT

ತೈಲದ ಮೇಲಿನ ವ್ಯಾಟ್‌ ಏರಿಕೆ; ದೆಹಲಿಯಲ್ಲಿ ಲೀಟರ್‌ ಡೀಸೆಲ್‌ಗೆ ₹7.10 ಹೆಚ್ಚಳ 

ಏಜೆನ್ಸೀಸ್
Published 5 ಮೇ 2020, 5:33 IST
Last Updated 5 ಮೇ 2020, 5:33 IST
ಪೆಟ್ರೋಲ್‌ ಬಂಕ್‌–ಸಾಂದರ್ಭಿಕ ಚಿತ್ರ
ಪೆಟ್ರೋಲ್‌ ಬಂಕ್‌–ಸಾಂದರ್ಭಿಕ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರದಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗಿದೆ. ದೆಹಲಿ ಸರ್ಕಾರ ತೈಲದ ಮೇಲಿನ ವ್ಯಾಟ್‌ ಹೆಚ್ಚಳ ಮಾಡಿರುವ ಬೆನ್ನಲ್ಲೇ ಪೆಟ್ರೋಲ್‌–ಡೀಸೆಲ್‌ ದರ ಹೆಚ್ಚಳವಾಗಿದೆ.

ಜಗತ್ತಿನಾದ್ಯಂತ ತೈಲ ಬೇಡಿಕೆ ಕುಸಿದಿದ್ದರೂ ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹1.67 ಹಾಗೂ ಡೀಸೆಲ್‌ ₹7.10 ಏರಿಕೆಯಾಗಿದೆ. ದೆಹಲಿಯಲ್ಲಿ ಪ್ರಸ್ತುತ ಗ್ರಾಹಕರು ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹71.26 ಹಾಗೂ ಲೀಟರ್‌ ಡೀಸೆಲ್‌ಗೆ ₹69.39 ನೀಡಬೇಕು.

ಲಾಕ್‌ಡೌನ್‌ ಅವಧಿಯಲ್ಲಿ ಸುಮಾರು 50 ದಿನಗಳು ತಟಸ್ಥವಾಗಿದ್ದ ತೈಲ ದರ, ರಾಜ್ಯ ಸರ್ಕಾರಗಳ ವ್ಯಾಟ್‌ ಹೆಚ್ಚಿಸುವ ನಿರ್ಧಾರಗಳಿಂದ ದರ ಹೆಚ್ಚಳವಾಗಿದೆ. ಲಾಕ್‌ಡೌನ್‌ನಿಂದ ಆದಾಯ ನಷ್ಟ ಅನುಭವಿಸಿರುವ ಸರ್ಕಾರಗಳು ತೈಲದ ಮೇಲಿನ ವ್ಯಾಟ್‌ ಹಾಗೂ ಮದ್ಯ ಮಾರಾಟದ ಮೇಲೆ ವಿಶೇಷ ತೆರಿಗೆಗಳನ್ನು ವಿಧಿಸಿ ಹಣ ಸಂಗ್ರಹಿಸುವ ಲೆಕ್ಕಾಚಾರ ನಡೆಸಿವೆ.

ADVERTISEMENT

ಕರ್ನಾಟಕ ಸರ್ಕಾರ ಏಪ್ರಿಲ್‌ 1ರಿಂದ ಜಾರಿಯಾಗುವಂತೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ವ್ಯಾಟ್‌ ಶೇ 3ರಷ್ಟು ಹೆಚ್ಚಿಸಿರುವ ಕಾರಣ, ಏಪ್ರಿಲ್‌ 1ರಿಂದ ಬೆಂಗಳೂರಿನಲ್ಲಿ ತೈಲ ದರದಲ್ಲಿ ಬದಲಾವಣೆಯಾಗಿಲ್ಲ. ಪ್ರತಿ ಲೀಟರ್‌ ಪೆಟ್ರೋಲ್‌ ₹73.55 ಹಾಗೂ ಪ್ರತಿ ಲೀಟರ್‌ ಡೀಸೆಲ್‌ ₹65.96 ನಿಗದಿಯಾಗಿದೆ. ಪ್ರಸ್ತುತ ಪೆಟ್ರೋಲ್‌ ಮೇಲಿನ ವ್ಯಾಟ್‌ ಶೇ 35 ಹಾಗೂ ಡೀಸೆಲ್‌ ಮೇಲಿನ ವ್ಯಾಟ್‌ ಶೇ 24ರಷ್ಟಿದೆ.

ದೆಹಲಿಯಲ್ಲಿ ಪೆಟ್ರೋಲ್‌ ಮೇಲಿನ ವ್ಯಾಟ್‌ ಶೇ 27ರಿಂದ ಶೇ 30ಕ್ಕೆ ಹಾಗೂ ಡೀಸೆಲ್‌ ಮೇಲಿನ ವ್ಯಾಟ್‌ ಶೇ 16.75ರಿಂದ ಶೇ 30ಕ್ಕೆ ಹೆಚ್ಚಿಸಲಾಗಿದೆ. ಹರಿಯಾಣದಲ್ಲಿ ಪೆಟ್ರೋಲ್‌ ದರ ₹1 ಹಾಗೂ ಡೀಸೆಲ್‌ ₹1.1, ಚೆನ್ನೈನಲ್ಲಿ ಪೆಟ್ರೋಲ್‌ ಲೀಟರ್‌ಗೆ ₹3.25 ಹಾಗೂ ಡೀಸೆಲ್‌ ದರ ₹2.50 ಏರಿಕೆಯಾಗಿದೆ.

ದೆಹಲಿ ಸರ್ಕಾರ ಮಂಗಳವಾರದಿಂದಲೇ ಜಾರಿಗೆ ಬರುವಂತೆ ಮದ್ಯದ ಮೇಲೆ ಶೇ 70 ವಿಶೇಷ ಕೊರೊನಾ ಶುಲ್ಕ ವಿಧಿಸಿ, ಮದ್ಯ ಪ್ರಿಯರಿಗೆ ಆಘಾತ ನೀಡಿದೆ.

ಏಪ್ರಿಲ್‌ನಲ್ಲಿ ದೇಶದಲ್ಲಿ ತೈಲ ಬಳಕೆ ಶೇ 70ರಷ್ಟು ಇಳಿಕೆಯಾಗಿದೆ. ಆದರೆ, ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಭಾರೀ ಬೇಡಿಕೆ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.