ADVERTISEMENT

ದಾಖಲೆಯ ಮಟ್ಟದಲ್ಲಿ ಪೆಟ್ರೋಲ್‌, ಡೀಸೆಲ್‌ ದರ; ಮುಂಬೈನಲ್ಲಿ ಪೆಟ್ರೋಲ್‌ ₹112.11

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2021, 3:24 IST
Last Updated 20 ಅಕ್ಟೋಬರ್ 2021, 3:24 IST
ವ್ಯಕ್ತಿಯೊಬ್ಬರು ಬೈಕ್‌ಗೆ ಪೆಟ್ರೋಲ್‌ ಹಾಕಿಸುತ್ತಿರುವುದು–ಸಂಗ್ರಹ ಚಿತ್ರ
ವ್ಯಕ್ತಿಯೊಬ್ಬರು ಬೈಕ್‌ಗೆ ಪೆಟ್ರೋಲ್‌ ಹಾಕಿಸುತ್ತಿರುವುದು–ಸಂಗ್ರಹ ಚಿತ್ರ   

ಬೆಂಗಳೂರು: ಜಾಗತಿಕವಾಗಿ ಕಚ್ಚಾ ತೈಲ ದರ ಏರಿಕೆಯಾಗಿರುವ ಬೆನ್ನಲ್ಲೇ ದೇಶದಲ್ಲಿ ಬುಧವಾರ ಪೆಟ್ರೋಲ್‌, ಡೀಸೆಲ್‌ ದರ ಸಾರ್ವಕಾಲಿಕ ದಾಖಲೆಯ ಮಟ್ಟ ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ 35 ಪೈಸೆ ಹೆಚ್ಚಳವಾಗಿದೆ.

ವಿಮಾನಗಳಿಗೆ ಬಳಸುವ ಏವಿಯೇಷನ್‌ ಟರ್ಬೈನ್‌ ಇಂಧನಕ್ಕಿಂತಲೂ ಪೆಟ್ರೋಲ್‌ ಶೇ 34ರಷ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ದೆಹಲಿಯಲ್ಲಿ ಒಂದು ಸಾವಿರ ಲೀಟರ್‌ ಜೆಟ್‌ ಇಂಧನಕ್ಕೆ ₹ 79,020.16 (ಪ್ರತಿ ಲೀಟರ್‌ಗೆ ಸುಮಾರು 79 ರೂಪಾಯಿ) ಇರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ₹ 106.19 ಮತ್ತು ಡೀಸೆಲ್‌ ₹ 94.92ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹109.89 ಮುಟ್ಟಿದ್ದು, ಡೀಸೆಲ್‌ ₹100.75 ಆಗಿದೆ.

ADVERTISEMENT

ವ್ಯಾಟ್‌ನ ಕಾರಣದಿಂದ ಮುಂಬೈನಲ್ಲಿ ಪೆಟ್ರೋಲ್‌ ₹112.11 ತಲುಪಿದರೆ, ಡೀಸೆಲ್‌ ₹102.89 ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್‌ ₹103.31, ಡೀಸೆಲ್‌ ₹99.26; ಕೋಲ್ಕತ್ತದಲ್ಲಿ ಪೆಟ್ರೋಲ್‌ ₹106.78, ಡೀಸೆಲ್‌ ₹98.03ಕ್ಕೆ ಏರಿಕೆಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ 85.08 ಡಾಲರ್‌ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.