ADVERTISEMENT

ಜವಳಿ ರಫ್ತು ಹೆಚ್ಚಳಕ್ಕೆ ದೇಶದ ಗುರಿ; ಜಾಗತಿಕ ಮೇಳಕ್ಕೆ ಪ್ರಧಾನಿ ಮೋದಿ ಭೇಟಿ

ಪಿಟಿಐ
Published 16 ಫೆಬ್ರುವರಿ 2025, 14:52 IST
Last Updated 16 ಫೆಬ್ರುವರಿ 2025, 14:52 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

–ಪಿಟಿಐ ಚಿತ್ರ

ನವದೆಹಲಿ: ‘2030ರೊಳಗೆ ದೇಶದ ಜವಳಿ ರಫ್ತು ಮೌಲ್ಯವು ₹9 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ADVERTISEMENT

ಇಲ್ಲಿನ ಭಾರತ ಮಂಟಪದಲ್ಲಿ ನಡೆಯುತ್ತಿರುವ ಜಾಗತಿಕ ಜವಳಿ ಮೇಳವಾದ ‘ಭಾರತ್‌ ಟೆಕ್ಸ್‌ 2025’ಕ್ಕೆ ಭಾನುವಾರ ಭೇಟಿ ನೀಡಿ ಪ್ರದರ್ಶನ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.

ಪ್ರಸ್ತುತ ಭಾರತವು ಜವಳಿ ಮತ್ತು ಸಿದ್ಧ‍ಉಡುಪು ರಫ್ತಿನಲ್ಲಿ ಜಾಗತಿಕ ಮಟ್ಟದಲ್ಲಿ 6ನೇ ಅತಿದೊಡ್ಡ ರಾಷ್ಟ್ರವಾಗಿದೆ. ಒಟ್ಟು ರಫ್ತು ಮೌಲ್ಯ ₹‌3 ಲಕ್ಷ ಕೋಟಿಯಷ್ಟಿದೆ. ಇದನ್ನು ಮೂರು ಪಟ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

ಕಳೆದ ಒಂದು ದಶಕದ ಅವಧಿಯಲ್ಲಿ ಕೇಂದ್ರ ಸರ್ಕಾರವು ಜವಳಿ ವಲಯದ ಅಭಿವೃದ್ಧಿಗೆ ಪೂರಕವಾದ ನೀತಿಗಳನ್ನು ರೂಪಿಸಿದೆ. ಹಾಗಾಗಿ, ಈ ವಲಯದಲ್ಲಿ ವಿದೇಶಿ ಹೂಡಿಕೆಯು ದುಪ್ಪಟ್ಟಾಗಿದೆ ಎಂದು ಹೇಳಿದರು.

‘ಈ ವಲಯದ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳಿಂದಾಗಿ ನಿಗದಿತ ಗುರಿ ಸಾಧನೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಯಾರಿಕಾ ವಲಯದಲ್ಲಿನ ಒಟ್ಟು ಉದ್ಯೋಗಗಳ ಪೈಕಿ ಈ ವಲಯದ ಪಾಲು ಶೇ 11ರಷ್ಟಿದೆ. ಹತ್ತಿ ಉತ್ಪನ್ನಗಳ ಘಟಕವೊಂದರ ಸ್ಥಾಪನೆಗೆ ₹75 ಕೋಟಿ ವೆಚ್ಚವಾಗಲಿದೆ. ಇದರಿಂದ 2 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಬ್ಯಾಂಕ್‌ಗಳು ಇಂತಹ ಘಟಕಗಳ ಸ್ಥಾಪನೆಗೆ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.

ಕಳೆದ ವರ್ಷ ದೇಶದ ಜವಳಿ ಮತ್ತು ಸಿದ್ಧಉಡುಪು ರಫ್ತು ಪ್ರಮಾಣವು ಶೇ 7ರಷ್ಟು ಏರಿಕೆಯಾಗಿದೆ. ಈ ವಲಯದಲ್ಲಿ ಕೌಶಲ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿದೆ ಎಂದರು. 

‘ಐಐಟಿ ಜತೆ ಕೈಜೋಡಿಸಿ’

ಜವಳಿ ಕೈಗಾರಿಕೆಯು ಐಐಟಿಯಂತಹ ಸಂಸ್ಥೆಗಳ ಜೊತೆಗೆ ಹೊಸ ತಂತ್ರಜ್ಞಾನದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮೋದಿ ಹೇಳಿದರು.

ರೈತರ ಹೊಲದಲ್ಲಿ ಬೆಳೆಯುವ ಹತ್ತಿಯಿಂದ ನೂಲು ತಯಾರಿಕೆಯು ಮೊದಲ ಹಂತವಾಗಿದೆ. ಈ ನೂಲನ್ನು ಕಾರ್ಖಾನೆಗೆ ಪೂರೈಸಬೇಕು. ಕಾರ್ಖಾನೆಯಿಂದ ತಯಾರಾಗುವ ಉಡುಪುಗಳು ಫ್ಯಾಷನ್‌ ಜಗತ್ತಿಗೆ ಪ್ರವೇಶಿಸಬೇಕು. ಫ್ಯಾಷನ್‌ ಮೂಲಕ ದೇಶೀಯ ಹತ್ತಿ ಉಡುಪುಗಳು ಜಾಗತಿಕ ಮಟ್ಟಕ್ಕೆ ತಲುಪಬೇಕಿದೆ. ಈ ಪೂರೈಕೆ ಸರಪಳಿಯಲ್ಲಿ ರೈತರು ನೇಕಾರರು ವಿನ್ಯಾಸಕರು ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.

2024–25ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಜವಳಿ ಸಚಿವಾಲಯಕ್ಕೆ ₹4417 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಅಲ್ಲದೆ ಬಜೆಟ್‌ನಲ್ಲಿ ಹತ್ತಿ ಉತ್ಪಾದನೆ ಹೆಚ್ಚಿಸಲು ಹತ್ತಿ ಮಿಷನ್‌ ಯೋಜನೆಯನ್ನು ಘೋಷಿಸಲಾಗಿದೆ. ಇದಕ್ಕೆ ₹500 ಕೋಟಿ ಮೀಸಲಿಡಲಾಗಿದೆ. 2025–26ನೇ ಸಾಲಿನ ಬಜೆಟ್‌ನಲ್ಲಿ ಸಚಿವಾಲಯಕ್ಕೆ ₹5272 ಕೋಟಿ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.