
ಪ್ರಜಾವಾಣಿ ವಾರ್ತೆ
ಬೆಂಗಳೂರು: ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆ ಉನ್ನತೀಕರಣ ಯೋಜನೆ (ಪಿಎಂಎಫ್ಎಂಇ) ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಸಾಲ ವಿತರಣೆಯಲ್ಲಿ ಕರ್ನಾಟಕದ ಜೊತೆಗೆ ತಮಿಳುನಾಡು ಕೂಡ ಮೊದಲ ಸ್ಥಾನ ಹಂಚಿಕೊಂಡಿದೆ.
ಕರ್ನಾಟಕದಲ್ಲಿ ಪಿಎಂಎಫ್ಎಂಇ ಯೋಜನೆಯ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ‘ಕರ್ನಾಟಕ ಆಹಾರ ಸಂಸ್ಕರಣೆ ಮತ್ತು ರಫ್ತು ನಿಗಮ’ವು (ಕೆಪೆಕ್) ಈ ಸಾಧನೆ ಮಾಡಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಹೇಳಿದ್ದಾರೆ.
2021-22ರಲ್ಲಿ ಶುರುವಾದ ಈ ಯೋಜನೆಯ ಅಡಿ ನೆರವು ಬಯಸಿ ಕೆಪೆಕ್‌ಗೆ ಜನವರಿ ಅಂತ್ಯಕ್ಕೆ 8,734 ಅರ್ಜಿಗಳು ಬಂದಿದ್ದವು. ಈ ಪೈಕಿ 7,872 ಅರ್ಜಿದಾರರಿಗೆ ಸಾಲ ವಿತರಿಸಲಾಗಿದೆ. 2025-26ರ ಆರ್ಥಿಕ ವರ್ಷದಲ್ಲೇ 8,162 ಅರ್ಜಿಗಳನ್ನು ಸ್ವೀಕರಿಸಿ 2,346 ಅರ್ಜಿಗಳಿಗೆ ಸಾಲ ಮಂಜೂರು ಮಾಡಲಾಗಿದೆ. 2,486 ಅರ್ಜಿಗಳು ಬ್ಯಾಂಕುಗಳಲ್ಲಿ ಪರಿಶೀಲನಾ ಹಂತದಲ್ಲಿವೆ. ಯೋಜನೆ ಪ್ರಾರಂಭವಾದ ಐದು ವರ್ಷಗಳಲ್ಲಿ ಇದು ಗರಿಷ್ಠ ಸಾಧನೆ ಎಂದು ಪ್ರಕಟಣೆ ತಿಳಿಸಿದೆ.