ನವದೆಹಲಿ: ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಾಲಗಳ ಮೇಲಿನ ಬಡ್ಡಿದರವನ್ನು ಶೇ 0.25ರಷ್ಟು ಕಡಿತಗೊಳಿಸಿದೆ. ಕಳೆದ ವಾರದಿಂದಲೇ ಈ ಪರಿಷ್ಕೃತ ಆದೇಶ ಜಾರಿಗೆ ಬಂದಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇತ್ತೀಚೆಗೆ ರೆಪೊ ದರದಲ್ಲಿ ಇಳಿಕೆ ಮಾಡಿದೆ. ಇದಕ್ಕೆ ಅನುಗುಣವಾಗಿ ಬಡ್ಡಿದರ ಕಡಿತಗೊಳಿಸಲಾಗಿದೆ. ಗೃಹ, ಕಾರು, ಶಿಕ್ಷಣ ಹಾಗೂ ವೈಯಕ್ತಿಕ ಸಾಲಗಳಿಗೆ ಈ ಪರಿಷ್ಕೃತ ದರ ಅನ್ವಯವಾಗಲಿದೆ. ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಗೃಹ ಸಾಲದ ಸಂಸ್ಕರಣೆ ಶುಲ್ಕ ಮತ್ತು ದಾಖಲೆಗಳ ಪರಿಶೀಲನಾ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. ಮಾರ್ಚ್ 31ರ ವರೆಗೆ ಈ ಸೌಲಭ್ಯ ದೊರೆಯಲಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಿದೆ.
ಪ್ರಸ್ತುತ ಗೃಹ ಸಾಲದ ಬಡ್ಡಿದರವನ್ನು ವಾರ್ಷಿಕವಾಗಿ ಶೇ 8.15ರಷ್ಟಕ್ಕೆ ಪರಿಷ್ಕರಿಸಲಾಗಿದೆ. ಪ್ರತಿ ₹1 ಲಕ್ಷಕ್ಕೆ ಇಎಂಐ ₹744 ಆಗಲಿದೆ. ಹೊಸ ಮತ್ತು ಹಳೆಯ ಕಾರು ಖರೀದಿಗೆ ಶೇ 8.50ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ. ಪ್ರತಿ ₹1 ಲಕ್ಷಕ್ಕೆ ಇಎಂಐ ₹1,240 ಆಗಲಿದೆ ಎಂದು ವಿವರಿಸಿದೆ.
ಶಿಕ್ಷಣ ಸಾಲಕ್ಕೆ ವಾರ್ಷಿಕ ಶೇ 7.85ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ. ವೈಯಕ್ತಿಕ ಸಾಲ ಪಡೆಯಲು ಗ್ರಾಹಕರು ಬ್ಯಾಂಕ್‌ಗೆ ಭೇಟಿ ನೀಡುವ ಅಗತ್ಯವಿಲ್ಲ. ಡಿಜಿಟಲ್ ಪ್ರಕ್ರಿಯೆ ಮೂಲಕವೇ ₹20 ಲಕ್ಷದವರೆಗೆ ಸಾಲ ಮಂಜೂರು ಮಾಡಲಾಗುತ್ತದೆ. ಇದಕ್ಕೆ ವಾರ್ಷಿಕವಾಗಿ ಪರಿಷ್ಕೃತ ಬಡ್ಡಿದರವು ಶೇ 11.25ರಷ್ಟಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.