ADVERTISEMENT

ಪುನಶ್ಚೇತನದ ಹಾದಿಯಲ್ಲಿ ಆರ್ಥಿಕತೆ: ಹಣಕಾಸು ಸಚಿವಾಲಯ ಅಭಿಪ್ರಾಯ

ಸರ್ಕಾರ, ಆರ್‌ಬಿಐ ಉತ್ತೇಜನಾ ಕೊಡುಗೆಗಳ ಫಲ

ಪಿಟಿಐ
Published 23 ಜೂನ್ 2020, 15:34 IST
Last Updated 23 ಜೂನ್ 2020, 15:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ ಬ್ಯಾಂಕ್‌ ವಿಳಂಬ ಮಾಡದೆ ಕೈಗೊಂಡ ಉತ್ತೇಜನಾ ಕೊಡುಗೆಗಳ ಫಲವಾಗಿ ಕೋವಿಡ್‌ನಿಂದ ಬಾಧಿತ ದೇಶಿ ಆರ್ಥಿಕತೆಯಲ್ಲಿ ಚೇತರಿಕೆಯ ಲಕ್ಷಣಗಳು ಕಂಡು ಬರುತ್ತಿವೆ ಎಂದು ಹಣಕಾಸು ಸಚಿವಾಲಯ ಅಭಿಪ್ರಾಯಪಟ್ಟಿದೆ.

ಕೃಷಿ, ತಯಾರಿಕೆ ಮತ್ತು ಸೇವಾ ವಲಯಗಳಲ್ಲಿ ಪುನಶ್ಚೇತನ ಕಂಡು ಬರುತ್ತಿದೆ. ದೇಶಿ ಅರ್ಥ ವ್ಯವಸ್ಥೆಯ ಗಟ್ಟಿ ತಳಹದಿಯಾಗಿರುವ ಕೃಷಿ ವಲಯವು ವಾಡಿಕೆಯ ಮುಂಗಾರಿನ ಕಾರಣಕ್ಕೆ ಆರ್ಥಿಕ ಚೇತರಿಕೆಗೆ ಅಗತ್ಯವಾದ ಉತ್ತೇಜನ ನೀಡಲಿದೆ.

ಕೈಗಾರಿಕೆ ಮತ್ತು ಸೇವಾ ವಲಯಗಳಿಗೆ ಹೋಲಿಸಿದರೆ ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಕೃಷಿ ವಲಯದ ಕೊಡುಗೆ ದೊಡ್ಡ ಮಟ್ಟದಲ್ಲಿ ಇರದಿದ್ದರೂ, ಅದರ ಪ್ರಗತಿಯು ಜೀವನೋಪಾಯಕ್ಕೆ ಕೃಷಿಯನ್ನೇ ನೆಚ್ಚಿಕೊಂಡಿರುವ ದೊಡ್ಡ ಪ್ರಮಾಣದ ಜನಸಂಖ್ಯೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಇತ್ತೀಚಿನ ಐತಿಹಾಸಿಕ ಕೃಷಿ ಸುಧಾರಣಾ ಕ್ರಮಗಳಿಂದ ಉತ್ಪಾದನೆಯ ದಕ್ಷತೆಯೂ ಹೆಚ್ಚಳಗೊಳ್ಳಲಿದೆ. ರೈತರಿಗೆ ಹೆಚ್ಚಿನ ಆದಾಯ ತಂದುಕೊಡಲಿದೆ ಎಂದು ಸಚಿವಾಲಯ ವಿಶ್ಲೇಷಿಸಿದೆ.

ADVERTISEMENT

ಮೇ ಮತ್ತು ಜೂನ್‌ನಲ್ಲಿ ವಿದ್ಯುತ್‌ ಮತ್ತು ಇಂಧನ ಬಳಕೆ, ಅಂತರರಾಜ್ಯ ಸರಕುಗಳ ಸಾಗಾಣಿಕೆ, ರಿಟೇಲ್‌ ಹಣಕಾಸು ವಹಿವಾಟಿನ ಏರಿಕೆಯು ಆರ್ಥಿಕ ಚಟುವಟಿಕೆಗಳು ಚೇತರಿಕೆ ಹಾದಿಯಲ್ಲಿ ಇರುವುದನ್ನು ದೃಢಪಡಿಸುತ್ತವೆ.

ಕೋವಿಡ್ ಪಿಡುಗು ನಿಯಂತ್ರಣ ಮತ್ತು ಕಾಯಿಲೆಪೀಡಿತರ ಚಿಕಿತ್ಸೆಗೆ ಬಳಸಲಾಗುವ ವೈಯಕ್ತಿಕ ಸುರಕ್ಷತಾ ಪರಿಕರಗಳ (ಪಿಪಿಇ) ತಯಾರಿಕೆಯಲ್ಲಿ ಭಾರತವು ಎರಡೇ ತಿಂಗಳಲ್ಲಿ ವಿಶ್ವದ ಅತಿದೊಡ್ಡ ದೇಶವಾಗಿ ಹೊರಹೊಮ್ಮಿರುವುದು ತಯಾರಿಕಾ ಕ್ಷೇತ್ರವು ಬಿಕ್ಕಟ್ಟಿನ ಪರಿಸ್ಥಿತಿಯಿಂದ ಅಲ್ಪಾವಧಿಯಲ್ಲಿ ತ್ವರಿತವಾಗಿ ಚೇತರಿಕೆ ಕಾಣುತ್ತಿರುವುದರ ದ್ಯೋತಕವಾಗಿದೆ.

ಸರ್ಕಾರ ಮತ್ತು ಆರ್‌ಬಿಐ ಅಲ್ಪಾವಧಿ ಮತ್ತು ದೀರ್ಘಾವಧಿ ಉತ್ತೇಜನಾ ಕೊಡುಗೆಗಳನ್ನುಕಿಂಚಿತ್ತೂ ವಿಳಂಬ ಮಾಡದೆ ಪ್ರಕಟಿಸಿದ್ದರಿಂದ ಆರ್ಥಿಕತೆಯು ಆರಂಭದಲ್ಲಿಯೇಕನಿಷ್ಠ ಹಾನಿಯಿಂದ ಚೇತರಿಸಿಕೊಂಡು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ. ಎಲ್ಲ ಪಾಲುದಾರರ ಸಂಘಟಿತ ಪ್ರಯತ್ನ ಮತ್ತು ಕೊಡುಗೆಗಳು ದೇಶಿ ಆರ್ಥಿಕತೆಯನ್ನು ಸದೃಢ ಮತ್ತು ಚಲನಶೀಲ ಸ್ವರೂಪದಲ್ಲಿ ಮರು ನಿರ್ಮಾಣ ಮಾಡಲು ನೆರವಾಗಿವೆ ಎಂದು ಸಚಿವಾಲಯ ವಿಶ್ಲೇಷಿಸಿದೆ.

ಮೇ ತಿಂಗಳ ಚಟುವಟಿಕೆ

₹ 9.65 ಲಕ್ಷ ಕೋಟಿ:ಡಿಜಿಟಲ್‌ ರಿಟೇಲ್‌ ಹಣಕಾಸು ವಹಿವಾಟು

₹ 24.2 ಲಕ್ಷ ಕೋಟಿ:ಮ್ಯೂಚುವಲ್ ಫಂಡ್‌ಗಳ ಸರಾಸರಿ ಸಂಪತ್ತು ನಿರ್ವಹಣಾ ಮೌಲ್ಯ

₹ 36.84 ಕೋಟಿ:ದಿನದ ಸರಾಸರಿ ಟೋಲ್‌ ಸಂಗ್ರಹ

₹ 8.98 ಲಕ್ಷ ಕೋಟಿ:ಇ–ವೇ ಬಿಲ್‌ ಮೊತ್ತ

47 %:ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಹೆಚ್ಚಳ

26 %:ರೈಲ್ವೆ ಸರಕು ಸಾಗಣೆ ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.