ADVERTISEMENT

Gold Rate: ಹಳದಿ ಲೋಹ ಬಲು ದುಬಾರಿ

ಸುಂಕ ಸಮರ: ಜನವರಿಯಿಂದ ಇಲ್ಲಿಯವರೆಗೆ ಚಿನ್ನದ ಧಾರಣೆ ಶೇ 14ರಷ್ಟು ಏರಿಕೆ

ರಾಯಿಟರ್ಸ್
Published 15 ಮಾರ್ಚ್ 2025, 23:30 IST
Last Updated 15 ಮಾರ್ಚ್ 2025, 23:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಅಮೆರಿಕದ ಸುಂಕ ನೀತಿಯು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಗೆ ಕಾರಣವಾಗಿದೆ. ಪ್ರಸಕ್ತ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಹಳದಿ ಲೋಹದ ಬೆಲೆಯಲ್ಲಿ ಶೇ 14ರಷ್ಟು ಹೆಚ್ಚಳವಾಗಿದೆ.

ಕಳೆದ ವರ್ಷವೂ ಚಿನ್ನದ ಬೆಲೆಯು ಶೇ 27ರಷ್ಟು ಏರಿಕೆ ಕಂಡಿತ್ತು. ಇಸ್ರೇಲ್‌ ಮತ್ತು ಹಮಾಸ್‌, ರಷ್ಯಾ ಮತ್ತು ಉಕ್ರೇನ್‌ ನಡುವಿನ ಸಂಘರ್ಷವು ಜಾಗತಿಕ ಬಿಕ್ಕಟ್ಟು ಸೃಷ್ಟಿಸಿದೆ. ಈಗ ಸುಂಕ ಸಮರವು ಚಿನ್ನದ ಧಾರಣೆಯ ಏರಿಕೆಗೆ ಕಾರಣವಾಗಿದೆ ಎಂದು ಚಿನಿವಾರ ‍ಪೇಟೆಯ ತಜ್ಞರು ಹೇಳಿದ್ದಾರೆ. 

ಕೆನಡಾ ಮತ್ತು ಮೆಕ್ಸಿಕೊದ ಸರಕುಗಳ ಮೇಲೆ ಅಮೆರಿಕವು ಶೇ 25ರಷ್ಟು ಸುಂಕ ವಿಧಿಸುತ್ತಿದೆ. ಚೀನಾದ ಸರಕುಗಳಿಗೂ ಸುಂಕದ ಬಿಸಿ ತಟ್ಟಿದೆ. ಇದಕ್ಕೆ ಪ್ರತಿಯಾಗಿ ಈ ಮೂರು ರಾಷ್ಟ್ರಗಳು, ಅಮೆರಿಕದ ಸರಕುಗಳ ಮೇಲೆ ಸುಂಕ ಹೇರಿಕೆಗೆ ಮುಂದಾಗಿವೆ. ಮತ್ತೊಂದೆಡೆ ಏಪ್ರಿಲ್‌ 2ರಿಂದ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೂ ಹೆಚ್ಚು ಸುಂಕ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

ADVERTISEMENT

‘ಸುಂಕ ಸಮರದಿಂದಾಗಿ ಜಾಗತಿಕ ಷೇರುಪೇಟೆಗಳು ಇಳಿಕೆ ಕಾಣುತ್ತಿವೆ. ಹಲವು ದೇಶಗಳ ಆರ್ಥಿಕತೆ ಬೆಳವಣಿಗೆ ದರವು ಮಂದಗತಿಯಲ್ಲಿದೆ. ಇದು ಸಹಜವಾಗಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ಡೆನ್ಮಾರ್ಕ್‌ನ ಸ್ಯಾಕ್ಸೋ ಬ್ಯಾಂಕ್‌ನ ಸರಕು ವಿಭಾಗದ ಮುಖ್ಯಸ್ಥ ಓಲೆ ಹ್ಯಾನ್ಸೆನ್ ಹೇಳುತ್ತಾರೆ.

‘ಡಾಲರ್ ಮೌಲ್ಯ ಏರಿಳಿತ ಕಾಣುತ್ತಿರುವುದರಿಂದ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನದ ಮೀಸಲು ಸಂಗ್ರಹಕ್ಕೆ ಮುಂದಾಗಿವೆ. ಇದು ಹಳದಿ ಲೋಹದ ಬೆಲೆ ಏರಿಕೆಗೆ ಕಾರಣವಾಗಿದೆ’ ಎಂದು ಐರ್ಲೆಂಡ್‌ನ ಚಿನ್ನ ವಹಿವಾಟು ಕಂಪನಿಯಾದ ಗೋಲ್ಡ್‌ಕೋರ್‌ ಸಿಇಒ ಡೇವಿಡ್ ರಸ್ಸೆಲ್‌ ಹೇಳುತ್ತಾರೆ.

‘ಚಿನ್ನದ ಬೆಲೆ ಏರಿಕೆ ಹಿಂದೆ ಹಲವು ಕಾರಣಗಳಿವೆ. ಜಾಗತಿಕ ಬಿಕ್ಕಟ್ಟು ಇನ್ನೂ ಶಮನಗೊಂಡಿಲ್ಲ. ಇದರಿಂದ ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಏರಿಕೆಯಾಗುವ ಆತಂಕವಿದೆ’ ಎಂಬುದು ವಿಶ್ವ ಚಿನ್ನದ ಸಮಿತಿಯ (ಡಬ್ಲ್ಯುಜಿಸಿ) ಸಂಶೋಧನಾ ವಿಭಾಗದ ಮುಖ್ಯಸ್ಥ ಜುವಾನ್ ಕಾರ್ಲೋಸ್ ಆರ್ಟಿಗಾಸ್‌ ಅವರ ವಿವರಣೆ.

ಕೇಂದ್ರೀಯ ಬ್ಯಾಂಕ್‌ಗಳಿಂದ ಖರೀದಿ ಹೆಚ್ಚಳ

ವಿಶ್ವದ ವಿವಿಧ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್‌ಗಳು ಮೀಸಲು ಉದ್ದೇಶಕ್ಕಾಗಿ ಅತಿಹೆಚ್ಚು ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿವೆ. ಇದರಿಂದ ಭಾರತವೂ ಹೊರತಲ್ಲ.  ಚೀನಾವು ಸತತ ನಾಲ್ಕು ತಿಂಗಳಿನಿಂದ ಚಿನ್ನದ ಮೀಸಲು ಸಂಗ್ರಹದ ಹೆಚ್ಚಳಕ್ಕೆ ಒತ್ತು ನೀಡಿದೆ.

ಜನವರಿ ಅಂತ್ಯಕ್ಕೆ ಚಿನ್ನದ ಮೀಸಲು ಮೌಲ್ಯ ₹17.95 ಲಕ್ಷ ಕೋಟಿ ಇತ್ತು. ಫೆಬ್ರುವರಿ ಅಂತ್ಯಕ್ಕೆ ₹18.13 ಲಕ್ಷ ಕೋಟಿಗೆ ತಲುಪಿದೆ. ವಿಶ್ವ ಚಿನ್ನದ ಸಮಿತಿಯ ವರದಿ ಪ್ರಕಾರ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೇರಿ ವಿಶ್ವದ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಕಳೆದ ವರ್ಷದ ನವೆಂಬರ್‌ನಲ್ಲಿ 53 ಟನ್‌ ಚಿನ್ನದ ಮೀಸಲು ಸಂಗ್ರಹಿಸಿವೆ. ಫೆಡರಲ್‌ ರಿಸರ್ವ್‌ನತ್ತ ಚಿತ್ತ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆದ ಫೆಡರಲ್‌ ರಿಸರ್ವ್ ಕಳೆದ ವರ್ಷ ಮೂರು ಬಾರಿ ಬಡ್ಡಿದರ ಇಳಿಕೆ ಮಾಡಿತ್ತು. ಪ್ರಸಕ್ತ ವರ್ಷದ ಜನವರಿಯಲ್ಲಿ ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಮಾರ್ಚ್‌ 18 ಮತ್ತು 19ರಂದು ನಡೆಯುವ ಸಭೆಯಲ್ಲಿ ಬಡ್ಡಿದರ ಕಡಿತ ಸಂಬಂಧ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಹೂಡಿಕೆದಾರರು ಎದುರು ನೋಡುತ್ತಿದ್ದಾರೆ. ಸಭೆಯ ನಿರ್ಧಾರವು ಹಳದಿ ಲೋಹದ ಬೆಲೆ ಏರಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ.

ಹಣದುಬ್ಬರ ಆತಂಕ ಟ್ರಂಪ್‌ ಸುಂಕ ನೀತಿಯಿಂದಾಗಿ ಅಮೆರಿಕದಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆಯಾಗುವ ಆತಂಕ ಎದುರಾಗಿದೆ. ಹಾಗಾಗಿ ಫೆಡರಲ್‌ ರಿಸರ್ವ್‌ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಅಲ್ಲಿನ ಗ್ರಾಹಕರ ವಿಶ್ವಾಸ ಸೂಚ್ಯಂಕವು ಹೂಡಿಕೆದಾರರಿಗೆ ಪ್ರಮುಖ ಆರ್ಥಿಕ ಸೂಚಕವಾಗಿದೆ. ದೇಶದ ಆರ್ಥಿಕತೆ ಬೆಳವಣಿಗೆ ಬಗ್ಗೆ ಗ್ರಾಹಕರು ಎಷ್ಟು ಆಶಾವಾದಿಗಳಾಗಿದ್ದಾರೆ ಎಂಬುದನ್ನು ಅಳೆಯುತ್ತದೆ. ಅಮೆರಿಕದಲ್ಲಿ ಈ ಸೂಚ್ಯಂಕವು ಮಾರ್ಚ್‌ನಲ್ಲಿ ಎರಡೂವರೆ ವರ್ಷದ ಕನಿಷ್ಠ ಮಟ್ಟವಾದ 57.9ಕ್ಕೆ ಇಳಿದಿದೆ. ಸುಂಕ ಸಮರದಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಬಹುದು. ಇದರಿಂದ ಹಣದುಬ್ಬರ ಹೆಚ್ಚಳವಾಗಲಿದೆ ಎಂಬ ಆತಂಕ ಕಾಡುತ್ತಿದೆ ಎಂದು ತಜ್ಞರು ಹೇಳುತ್ತಾರೆ.

ದೇಶದ ಚಿನಿವಾರ ಪೇಟೆಯ ಕಥೆ ದೆಹಲಿಯ ಚಿನಿವಾರ ಪೇಟೆಯಲ್ಲೂ ಚಿನ್ನದ ಧಾರಣೆಯು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಆಭರಣ ತಯಾರಕರು ದಾಸ್ತಾನುಗಾರರಿಂದ ಖರೀದಿ ಹೆಚ್ಚಳವು ಇದಕ್ಕೆ ಕಾರಣವಾಗಿದೆ. ಅಲ್ಲದೆ ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಂದ ಚಿನ್ನದ ಖರೀದಿಯು ಹೆಚ್ಚಳವಾಗಿರುವುದು ದೇಶೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಮೂರು ದಿನದ ಹಿಂದೆ ನಡೆದ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ ದರವು (ಶೇ 99.9 ಪರಿಶುದ್ಧತೆ) ₹89450 ಹಾಗೂ ಆಭರಣ ಚಿನ್ನದ ದರವು (ಶೇ 99.5 ಪರಿಶುದ್ಧತೆ) ₹89050ಕ್ಕೆ ಮುಟ್ಟಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. 

ಫೆಡರಲ್‌ ರಿಸರ್ವ್‌ನತ್ತ ಚಿತ್ತ

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆದ ಫೆಡರಲ್‌ ರಿಸರ್ವ್, ಕಳೆದ ವರ್ಷ ಮೂರು ಬಾರಿ ಬಡ್ಡಿದರ ಇಳಿಕೆ ಮಾಡಿತ್ತು. ಪ್ರಸಕ್ತ ವರ್ಷದ ಜನವರಿಯಲ್ಲಿ ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು.

ಮಾರ್ಚ್‌ 18 ಮತ್ತು 19ರಂದು ನಡೆಯುವ ಸಭೆಯಲ್ಲಿ ಬಡ್ಡಿದರ ಕಡಿತ ಸಂಬಂಧ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಹೂಡಿಕೆದಾರರು ಎದುರು ನೋಡುತ್ತಿದ್ದಾರೆ. ಸಭೆಯ ನಿರ್ಧಾರವು ಹಳದಿ ಲೋಹದ ಬೆಲೆ ಏರಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ.

ಚಿಲ್ಲರೆ ಹಣದುಬ್ಬರದ ಏರಿಕೆ ಆತಂಕ

ಟ್ರಂಪ್‌ ಸುಂಕ ನೀತಿಯಿಂದಾಗಿ ಅಮೆರಿಕದಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆ ಆಗುವ ಆತಂಕ ಎದುರಾಗಿದೆ. ಹಾಗಾಗಿ, ಫೆಡರಲ್‌ ರಿಸರ್ವ್‌ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.

ಗ್ರಾಹಕರ ವಿಶ್ವಾಸ ಸೂಚ್ಯಂಕವು ಹೂಡಿಕೆದಾರರಿಗೆ ಪ್ರಮುಖ ಆರ್ಥಿಕ ಸೂಚಕವಾಗಿದೆ. ದೇಶದ ಆರ್ಥಿಕತೆ ಬೆಳವಣಿಗೆ ಬಗ್ಗೆ ಗ್ರಾಹಕರು ಎಷ್ಟು ಆಶಾವಾದಿಗಳಾಗಿದ್ದಾರೆ ಎಂಬುದನ್ನು ಅಳೆಯುತ್ತದೆ. ಅಮೆರಿಕದಲ್ಲಿ ಈ ಸೂಚ್ಯಂಕವು ಮಾರ್ಚ್‌ನಲ್ಲಿ ಎರಡೂವರೆ ವರ್ಷದ ಕನಿಷ್ಠ ಮಟ್ಟವಾದ 57.9ಕ್ಕೆ ಇಳಿದಿದೆ. ಸುಂಕ ಸಮರದಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಬಹುದು.ಇದರಿಂದ ಹಣದುಬ್ಬರ ಹೆಚ್ಚಳವಾಗಲಿದೆ ಎಂಬ ಆತಂಕ ಗ್ರಾಹಕರಿಗೆ ಕಾಡುತ್ತಿದೆ ಎಂದು ತಜ್ಞರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.