ನವದೆಹಲಿ: ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ, ಡಾಲರ್ ಎದುರು ರೂಪಾಯಿ ಮೌಲ್ಯ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇತಿಹಾಸದಲ್ಲೇ ಮೊದಲ ಬಾರಿ ಪ್ರತಿ ಡಾಲರ್ ಮೌಲ್ಯ ₹86.04 ಆಗಿದೆ ಎಂದು ಉಲ್ಲೇಖಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಪ್ರತಿ ಡಾಲರ್ ಮೌಲ್ಯ ₹58ರಿಂದ ₹59 ಇದ್ದಾಗ ಸರ್ಕಾರದ ಪ್ರತಿಷ್ಠೆಯೊಂದಿಗೆ ರೂಪಾಯಿ ಮೌಲ್ಯವನ್ನು ಪ್ರಧಾನಿ ಮೋದಿ ಹೋಲಿಕೆ ಮಾಡಿದ್ದರು. 'ನನಗೆಲ್ಲವೂ ಗೊತ್ತಿದೆ, ದೇಶವೊಂದರ ರೂಪಾಯಿ ಮೌಲ್ಯ ಹೀಗೆ ಕುಸಿಯಲು ಸಾಧ್ಯವಿಲ್ಲ' ಎಂದು ಮೋದಿ ಹೇಳಿಕೆ ನೀಡಿರುವುದಾಗಿ ಪ್ರಿಯಾಂಕಾ ಹೇಳಿದ್ದಾರೆ.
'ಇಂದು ಸ್ವತಃ ಮೋದಿ ಅವರೇ ಪ್ರಧಾನಿಯಾಗಿದ್ದು, ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿತ ಕಂಡಿದೆ. ಈ ಕುರಿತು ಪ್ರಧಾನಿ ಮೋದಿ ದೇಶದ ಜನತೆಗೆ ಉತ್ತರ ನೀಡಬೇಕು' ಎಂದು ಪ್ರಿಯಾಂಕಾ ಆಗ್ರಹಿಸಿದ್ದಾರೆ.
ಶುಕ್ರವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 18 ಪೈಸೆಗಳಷ್ಟು ಕುಸಿದಿತ್ತು. ಪ್ರತಿ ಡಾಲರ್ ಮೌಲ್ಯ ₹86.04 ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.