ADVERTISEMENT

ಸಾರ್ವಜನಿಕ ವೈಫೈ ಸೇವೆ: ಜಿಎನ್‌ಎ ಇಂಡಿಯಾದ ಹೊಸ ಯೋಜನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:36 IST
Last Updated 17 ಡಿಸೆಂಬರ್ 2025, 6:36 IST
   

ಬೆಂಗಳೂರು: ನಗರ ಮೂಲದ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಯಾದ GNA ಇಂಡಿಯಾ ಪ್ರೈವೇಟ್ ಲಿಮಿಟೆಡ್, ಭಾರತದಲ್ಲಿ ತನ್ನ ಅಧಿಕೃತ ಪ್ರವೇಶವನ್ನು ಇಂದು ಘೋಷಿಸಿದ್ದು, ರಾಜ್ಯ ಹಾಗೂ ದೇಶದಾದ್ಯಂತ ಸುರಕ್ಷಿತ ಸಾರ್ವಜನಿಕ ವೈ-ಫೈ ಸೇವೆಗಳನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅನಾವರಣಗೊಳಿಸಿದೆ. ಈ ಸಂದರ್ಭ ಕರ್ನಾಟಕದಲ್ಲಿ ತನ್ನ ಕಾರ್ಯಾರಂಭವನ್ನು ಘೋಷಿಸುವ ಜೊತೆಗೆ, ಭಾರತದ ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಅವರನ್ನು ಮೂರು ವರ್ಷಗಳ ಅವಧಿಗೆ ಬ್ರಾಂಡ್ ಅಂಬಾಸಡರ್ ಆಗಿ ನೇಮಿಸಲಾಗಿದೆ.

ಗ್ರಾಮೀಣ ಪ್ರದೇಶಗಳು, ಪ್ರವಾಸಿ ತಾಣಗಳು, ದೂರದ ಮತ್ತು ಸಂಪರ್ಕ ಸೌಲಭ್ಯ ಕಡಿಮೆ ಇರುವ ಪ್ರದೇಶಗಳಲ್ಲಿ ವೇಗವಾದ ಹಾಗೂ ವಿಶ್ವಾಸಾರ್ಹ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವ ಮೂಲಕ ಡಿಜಿಟಲ್ ಅಂತರವನ್ನು ಕಡಿಮೆ ಮಾಡುವುದು ಜಿಎನ್‌ಎ ಇಂಡಿಯಾದ ಪ್ರಮುಖ ಗುರಿಯಾಗಿದೆ.

ಜಿಎನ್‌ಎ ಇಂಡಿಯಾದ ಪ್ರಮುಖ ಯೋಜನೆಯಾದ ಭಾರತ್ ಸ್ಮಾರ್ಟ್ ಚೈನ್, ಅತ್ಯಾಧುನಿಕ ಕ್ವಾಂಟಮ್ ಕ್ರಿಪ್ಟೊಗ್ರಫಿ ತಂತ್ರಜ್ಞಾನದ ಮೇಲೆ ಆಧಾರಿತವಾಗಿದ್ದು, ಸಂವಹನ, ಡಿಜಿಟಲ್ ಪಾವತಿ ಮತ್ತು ಹಣಕಾಸು ವ್ಯವಹಾರಗಳಿಗೆ ಅತ್ಯಂತ ಉನ್ನತ ಮಟ್ಟದ ಭದ್ರತೆಯನ್ನು ಒದಗಿಸುತ್ತದೆ. ಜಾಗತಿಕ ಮಟ್ಟದ ಗಣಿತಜ್ಞರು ಮತ್ತು ಕ್ರಿಪ್ಟೋಗ್ರಾಫರ್‌ಗಳು ಈ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಿದ್ದಾರೆ.

ADVERTISEMENT

ಈ ಯೋಜನೆ ಡಿಜಿಟಲ್ ಇಂಡಿಯಾ ಅಭಿಯಾನದೊಂದಿಗೆ ಹೊಂದಿಕೆಯಾಗಿದ್ದು, 2023ರ ಅಕ್ಟೋಬರ್‌ನಿಂದ BSNL ಮೂಲಕ ಪೈಲಟ್ ಪ್ರಾಜೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ 2024ರ ಜನವರಿಯಲ್ಲಿ ಅಧಿಕೃತ ಸಾರ್ವಜನಿಕ ವೈ-ಫೈ ಪಾಲುದಾರ ಒಪ್ಪಂದವನ್ನು ಪಡೆದಿದೆ.

ಈ ಕುರಿತು ಜಿಎನ್‌ಎ ಇಂಡಿಯಾ ಪ್ರತಿನಿಧಿ ಮಾತನಾಡಿ, ‘ಡಿಜಿಟಲ್ ಭಾರತ ನಿರ್ಮಾಣದಲ್ಲಿ ಸುರಕ್ಷಿತ ಸಂಪರ್ಕ ವ್ಯವಸ್ಥೆ ಬಹಳ ಮುಖ್ಯ. ಭಾರತ್ ಸ್ಮಾರ್ಟ್ ಚೈನ್ ಮೂಲಕ ದಿನನಿತ್ಯದ ಡಿಜಿಟಲ್ ವ್ಯವಹಾರಗಳಿಗೆ ಕ್ವಾಂಟಮ್ ಮಟ್ಟದ ಭದ್ರತೆಯನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ’ಎಂದರು.

ಬ್ರಾಂಡ್ ಅಂಬಾಸಿಡರ್ ಹರ್ಭಜನ್ ಸಿಂಗ್ ಮಾತನಾಡಿ, ‘ಡಿಜಿಟಲ್ ಸಂಪರ್ಕ ಇಂದು ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಸುರಕ್ಷಿತ ಹಾಗೂ ಸಮಾನ ಡಿಜಿಟಲ್ ಪ್ರವೇಶಕ್ಕೆ ಕೆಲಸ ಮಾಡುತ್ತಿರುವ ಜಿಎನ್‌ಎ ಇಂಡಿಯಾ ಜೊತೆ ಕೈಜೋಡಿಸಿರುವುದು ನನಗೆ ಹೆಮ್ಮೆ’ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.