ADVERTISEMENT

ನೋಟಿನಲ್ಲಿ ಗಾಂಧಿ ಜತೆ ರವೀಂದ್ರನಾಥ ಟ್ಯಾಗೋರ್, ಅಬ್ದುಲ್ ಕಲಾಂ ಚಿತ್ರ: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2022, 11:02 IST
Last Updated 5 ಜೂನ್ 2022, 11:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕರೆನ್ಸಿ ನೋಟಿನಲ್ಲಿ ಮಹಾತ್ಮ ಗಾಂಧಿ ಚಿತ್ರದ ಜತೆಗೆ ಇನ್ನು ಮುಂದೆ ರವೀಂದ್ರನಾಥ ಟ್ಯಾಗೋರ್, ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಚಿತ್ರವೂ ಬರಲಿದೆಯೇ? ಕರೆನ್ಸಿ ನೋಟಿನಲ್ಲಿ ಟ್ಯಾಗೋರ್ ಮತ್ತು ಕಲಾಂ ಚಿತ್ರವನ್ನೂ ಅಳವಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಗಾಂಧಿ, ಕಲಾಂ ಹಾಗೂ ಟ್ಯಾಗೋರ್ ವಾಟರ್‌ಮಾರ್ಕ್ ಹೊಂದಿರುವ ಎರಡು ಪ್ರತ್ಯೇಕ ಸೆಟ್‌ಗಳ ಮಾದರಿಯನ್ನು ಆರ್‌ಬಿಐ ಹಾಗೂ ಹಣಕಾಸು ಸಚಿವಾಲಯದ ಅಧೀನದಲ್ಲಿ ಬರುವ ‘ಸೆಕ್ಯೂರಿಟಿ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ’ವು (ಎಸ್‌ಪಿಎಂಸಿಐಎಲ್) ದೆಹಲಿ ಐಐಟಿಪ್ರಾಧ್ಯಾಪಕದಿಲೀಪ್ ಶಹಾನಿ ಅವರಿಗೆ ಪರಿಶೀಲನೆಗಾಗಿ ಕಳುಹಿಸಿಕೊಟ್ಟಿವೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಎರಡು ಮಾದರಿಗಳ ಪೈಕಿ ಒಂದನ್ನು ಆಯ್ಕೆ ಮಾಡಿ ಪರಿಗಣನೆಗಾಗಿ ಸರ್ಕಾರದ ಮುಂದಿರಿಸುವಂತೆ ಶಹಾನಿ ಅವರಿಗೆ ಸೂಚಿಸಲಾಗಿದೆ. ನೋಟುಗಳಲ್ಲಿ ಒಂದು ಅಥವಾ ಎಲ್ಲ ಚಿತ್ರಗಳನ್ನು ಆಯ್ಕೆ ಮಾಡಬೇಕೇ ಎಂಬ ನಿರ್ಧಾರವನ್ನು ಅಂತಿಮವಾಗಿ ಉನ್ನತ ಮಟ್ಟದಲ್ಲಿ ಕೈಗೊಳ್ಳಲಾಗುವುದು ಎಂದು ವರದಿ ಉಲ್ಲೇಖಿಸಿದೆ.

ಕರೆನ್ಸಿ ನೋಟುಗಳಲ್ಲಿ ಗಾಂಧಿ ಅವರ ಚಿತ್ರದ ಜತೆ ಟ್ಯಾಗೋರ್, ಕಲಾಂ ಚಿತ್ರಗಳನ್ನೂ ಸೇರಿಸುವ ಬಗ್ಗೆ ಆರ್‌ಬಿಐಯ ಆಂತರಿಕ ಸಮಿತಿಯು 2020ರ ವರದಿಯಲ್ಲಿ ಪ್ರಸ್ತಾಪಿಸಿತ್ತು. ಇದರ ಆಧಾರದಲ್ಲಿ 2021ರಲ್ಲಿ, ವಿನ್ಯಾಸದ ಮಾದರಿಗಳನ್ನು ಸಿದ್ಧಪಡಿಸುವಂತೆ ಮೈಸೂರಿನಲ್ಲಿರುವ ಕರೆನ್ಸಿ ನೋಟು ಮುದ್ರಣಾಲಯ ಮತ್ತು ಮಧ್ಯಪ್ರದೇಶದ ಹೊಶಂಗಾಬಾದ್‌ನ ಎಸ್‌ಪಿಎಂಸಿಐಎಲ್‌ನ ಸೆಕ್ಯೂರಿಟಿ ಪೇಪರ್‌ ಮಿಲ್‌ಗೆ ಆರ್‌ಬಿಐ ಸೂಚಿಸಿತ್ತು ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.