ADVERTISEMENT

ಆರ್‌ಬಿಐಗೆ ರಾಜನ್‌ ಬೆಂಬಲ

ಸ್ವಾಯತ್ತತೆ ಗೌರವಿಸದೇ ಇದ್ದರೆ ಅನಾಹುತ ಕಟ್ಟಿಟ್ಟಬುತ್ತಿ: ರಘುರಾಂ ರಾಜನ್‌

ಪಿಟಿಐ
Published 7 ನವೆಂಬರ್ 2018, 20:39 IST
Last Updated 7 ನವೆಂಬರ್ 2018, 20:39 IST
ರಘುರಾಂ ರಾಜನ್‌
ರಘುರಾಂ ರಾಜನ್‌   

ನವದೆಹಲಿ: ‘ಕೇಂದ್ರ ಸರ್ಕಾರ ಕಾರ್‌ ಆದರೆ, ಆರ್‌ಬಿಐ ಅದರ ಸಿಟ್‌ ಬೆಲ್ಟ್‌.ಬೆಲ್ಟ್‌ ಧರಿಸದೇ ವಾಹನ ಚಲಾಯಿಸಿದರೆ ತೀವ್ರ ಸ್ವರೂಪದ ಅಪಘಾತಕ್ಕೆ ಗುರಿಯಾಗುವ ಸಾಧ್ಯತೆಯೇ ಹೆಚ್ಚು..’ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಮಧ್ಯೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಕೇಂದ್ರೀಯ ಬ್ಯಾಂಕ್‌ನ ಮಾಜಿ ಗವರ್ನರ್‌ ರಘುರಾಂ ರಾಜನ್‌ ಅವರು ಪ್ರತಿಕ್ರಿಯೆ ನೀಡಿರುವ ರೀತಿ ಇದು.

‘ಆರ್‌ಬಿಐ, ಸರ್ಕಾರದ ಸೀಟ್ ಬೆಲ್ಟ್‌ ಇದ್ದಂತೆ. ಬೆಲ್ಟ್‌ ಧರಿಸದೇ ವಾಹನ ಚಲಾಯಿಸಿದರೆ ಅಪಾಯ ಕಟ್ಟಿಟ್ಟಬುತ್ತಿ’ ಎಂದು ರಾಜನ್‌ ಎಚ್ಚರಿಕೆ ನೀಡಿದ್ದಾರೆ.

ಆರ್‌ಬಿಐನ ಸ್ವಾಯತ್ತತೆಯನ್ನು ಗೌರವಿಸಬೇಕು ಎಂದು ಬಲವಾಗಿ ಪ್ರತಿಪಾದಿಸಿರುವ ಅವರು, ‘ಕೇಂದ್ರ ಸರ್ಕಾರ ಆರ್‌ಬಿಐನ ಅಧಿಕಾರ ಮೊಟಕು ಮಾಡಲು ಪ್ರಯತ್ನಿಸಿದರೆ, ಅದಕ್ಕೆ ಕಿವಿಗೊಡದೇ ಇರುವ ಸ್ವಾತಂತ್ರ್ಯ ಹೊಂದಿದೆ’ಎಂದು ತಿಳಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಮಧ್ಯೆ ಮೂಡಿರುವ ಬಿಕ್ಕಟ್ಟು ದಿನೇ ದಿನೇ ಹೆಚ್ಚುತ್ತಲೇ ಇದೆ. ಕೆಲವು ಬ್ಯಾಂಕ್‌ಗಳಿಗೆ ವಿಧಿಸಿರುವ ನಿರ್ಬಂಧಿತ ಕ್ರಮಗಳ ಹೇರಿಕೆ (ಪಿಸಿಎ) ಮತ್ತು ನಗದು ಲಭ್ಯತೆ ನಿಯಮಗಳನ್ನು ಸಡಿಲಿಸುವಂತೆ ಕೇಂದ್ರ ಸರ್ಕಾರ ಆರ್‌ಬಿಐ ಮೇಲೆ ಒತ್ತಡ ತರುತ್ತಿದೆ. ಈ ಕುರಿತು ರಾಜನ್‌ಸಿಎನ್‌ಬಿಸಿ ಟಿವಿ18ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಸಂಸ್ಥೆಯ ಹಿತರಕ್ಷಣೆ ಆರ್‌ಬಿಐ ಆಡಳಿತ ಮಂಡಳಿಯ ಮೂಲ ಉದ್ದೇಶವಾಗಿದೆ.ಬೇರೆಯವರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವುದಿಲ್ಲ ಎನ್ನುವುದನ್ನು ಅದು ಸ್ಪಷ್ಟಪಡಿಸಬೇಕಾಗಿದೆ.

‘ಆರ್ಥಿಕ ಬೆಳವಣಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಗಮನ ನೀಡುತ್ತದೆ. ಆರ್ಥಿಕ ಸ್ಥಿರತೆಯ ಆಧಾರದ ಮೇಲೆ ಆರ್‌ಬಿಐ ನಿಗದಿಪಡಿಸುವ ಇತಿಮಿತಿಗಳಡಿಯಲ್ಲಿ ಕೇಂದ್ರ ಸರ್ಕಾರಎಲ್ಲಾ ರೀತಿಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತದೆ. ಇದು ಆರ್‌ಬಿಐ ಮತ್ತು ಸರ್ಕಾರದ ಮಧ್ಯೆ ಇರುವ ಸಂಬಂಧ.ಹೀಗಾಗಿ ಆರ್‌ಬಿಐ ತನ್ನ ಕಠಿಣ ನಿಯಮ ಸಡಿಲುಸುವಂತೆ ಕೇಂದ್ರ ಸರ್ಕಾರ ಒತ್ತಡ ತರುವ ಪ್ರಯತ್ನ ನಡೆಸುತ್ತದೆ’ಎಂದು ಅವರು ವಿವರಿಸಿದ್ದಾರೆ.

‘ದೇಶದ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವುದು ಆರ್‌ಬಿಐನ ಜವಾಬ್ದಾರಿಯಾಗಿದೆ. ಈ ಕಾರಣಕ್ಕಾಗಿಯೇ ಅದಕ್ಕೆ ಧಕ್ಕೆ ಒದಗಿಸುವ ಕ್ರಮಗಳು ಅಥವಾ ನಿರ್ಧಾರಗಳನ್ನು ತಿರಸ್ಕರಿಸುವ ಅಧಿಕಾರವನ್ನೂ ಆರ್‌ಬಿಐ ಹೊಂದಿದೆ’

‘ಆರ್‌ಬಿಐ ಮೇಲೆ ಒತ್ತಡ ತರುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ.ಕೇಂದ್ರ ಸರ್ಕಾರದ ಆದೇಶ ಪಾಲಿಸುವುದಿಲ್ಲ ಎಂದು ಆರ್‌ಬಿಐ ಹೇಳುತ್ತಿರುವುದು ಹೊಸ ಬೆಳವಣಿಗೆ ಏನಲ್ಲ. ಈ ಹಿಂದೆಯೂ ಇಲ್ಲ ಎಂದು ಹೇಳಿದೆ. ಆದರೆ, ಸರ್ಕಾರ ಮನವಿ ಮಾಡಿಕೊಳ್ಳಬೇಕು. ತನ್ನ ನಿರ್ಧಾರದ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಆಗ ಒಂದು ಹಂತದಲ್ಲಿ ಆರ್‌ಬಿಐ ಒಪ್ಪಿಗೆ ನೀಡುವ ಸಾಧ್ಯತೆ ಇರುತ್ತದೆ’ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಆರ್‌ಬಿಐ ಕಾಯ್ದೆಯ ಸೆಕ್ಷನ್‌ 7 ಬಳಸಿ ಒತ್ತಡ ಹೇರುವ ಕೇಂದ್ರದ ಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಎರಡೂ ಕಡೆಯವರು ತಮ್ಮ ಉದ್ದೇಶ ಮತ್ತು ಯೋಚನೆಗಳನ್ನು ಪರಸ್ಪರ ಗೌರವಿಸಿದರೆ ಒಳ್ಳೆಯದು’ ಎಂದಿದ್ದಾರೆ.

‘ಸೆಕ್ಷನ್‌ 7ರ ಪ್ರಕಾರ ಸರ್ಕಾರ ಹೇಳುವುದನ್ನು ಆರ್‌ಬಿಐ ಕೇಳಿಸಿಕೊಳ್ಳಲೇಬೇಕು. ಆದರೆ, ಅಂತಿಮವಾಗಿ ದೇಶದ ಹಿತರಕ್ಷಣೆ ಮತ್ತು ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಾಗಿದೆ’ ಎಂದಿದ್ದಾರೆ.

‘ಆರ್ಥಿಕ ಸ್ಥಿತಿ ಉತ್ತಮವಾಗಿದೆ’
‘ಹಣದುಬ್ಬರದ ದೃಷ್ಟಿಯಿಂದ ನೋಡುವುದಾದರೆ ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಕೇಂದ್ರ ಮತ್ತು ಆರ್‌ಬಿಐಗೆ ಇದರ ಶ್ರೇಯಸ್ಸು ಸಲ್ಲುತ್ತದೆ’ ಎಂದು ರಾಜನ್‌ ಹೇಳಿದ್ದಾರೆ.

‘ಬೇರೆಲ್ಲಾ ದೇಶಗಳಿಗಿಂತಲೂ ಅತ್ಯಂತ ವೇಗವಾಗಿ ಭಾರತ ಅಭಿವೃದ್ಧಿ ಹೊಂದುತ್ತಿದೆ. ಆದರೆ, ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ನಾವು ಈಗ ಮಾಡುತ್ತಿರುವುದಕ್ಕಿಂತಲೂ ಹೆಚ್ಚಿನದನ್ನು ಮಾಡುವ ಅಗತ್ಯವಿದೆ’ ಎಂದಿದ್ದಾರೆ.

ವಿತ್ತೀಯ ಕೊರತೆಯು ಅತ್ಯಂತ ಕಳವಳಕಾರಿಯಾಗಿದೆ. ನಾನು ಕೇವಲ ಕೇಂದ್ರದ ವಿತ್ತೀಯ ಕೊರತೆ ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ ಕೇಂದ್ರದ ವಿತ್ತೀಯ ಕೊರತೆಯು ತಗ್ಗುತ್ತಿದೆ. ಆದರೆ, ರಾಜ್ಯಗಳು ವಿತ್ತೀಯ ಕೊರತೆ ನಿಯಂತ್ರಿಸುವಲ್ಲಿ ವಿಫಲವಾಗಿವೆ. ಹೀಗಾಗಿ ಕಳೆದ ಮೂರರಿಂದ ನಾಲ್ಕು ವರ್ಷಗಳ ಒಟ್ಟಾರೆ ವಿತ್ತೀಯ ಕೊರತೆಯನ್ನು ಗಮನಿಸಿದರೆ ಏರಿಕೆಯಾಗುತ್ತಲೇ ಇದೆ.

ರಫ್ತು ವಹಿವಾಟು ಮಂದಗತಿಯ ಬೆಳವಣಿಗೆ ಹಾಗೂ ಸ್ವಲ್ಪ ಮಟ್ಟಿಗೆ ತೈಲ ದರ ಏರಿಕೆಯಿಂದಾಗಿ ಚಾಲ್ತಿ ಖಾತೆ ಕೊರತೆ (ಸಿಎಡಿ) ಅಂತರ ಹೆಚ್ಚುತ್ತಿದೆ. ಇತ್ತೀಚೆಗೆ ‘ಸಿಎಡಿ’ ತುಸು ತಗ್ಗಿದೆ. ಈ ಹಂತದಲ್ಲಿ ಅಲಕ್ಷಿಸುವುದು ಸರಿಯಲ್ಲ ಎಂದೂ ರಾಜನ್‌ ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.