ADVERTISEMENT

ಬಡ್ಡಿ ದರ ಕಡಿತ: ತ್ವರಿತ ವರ್ಗಾವಣೆ -ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ನಿರೀಕ್ಷೆ

ಪಿಟಿಐ
Published 8 ಜುಲೈ 2019, 19:45 IST
Last Updated 8 ಜುಲೈ 2019, 19:45 IST
ದೆಹಲಿಯಲ್ಲಿ ಸೋಮವಾರ ನಡೆದ ಆರ್‌ಬಿಐ ನಿರ್ದೇಶಕ ಮಂಡಳಿ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಭಾಗವಹಿಸಿದರು  – ಪಿಟಿಐ ಚಿತ್ರ
ದೆಹಲಿಯಲ್ಲಿ ಸೋಮವಾರ ನಡೆದ ಆರ್‌ಬಿಐ ನಿರ್ದೇಶಕ ಮಂಡಳಿ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಭಾಗವಹಿಸಿದರು  – ಪಿಟಿಐ ಚಿತ್ರ   

ನವದೆಹಲಿ: ಅಲ್ಪಾವಧಿ ಬಡ್ಡಿ ದರ ಕಡಿತದ ಪ್ರಯೋಜನವನ್ನು ವಾಣಿಜ್ಯ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ತ್ವರಿತವಾಗಿ ವರ್ಗಾವಣೆ ಮಾಡಲಿವೆ ಎಂಬುದು ತಮ್ಮ ನಿರೀಕ್ಷೆಯಾಗಿದೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್‌ಬಿಐ, ಬ್ಯಾಂಕ್‌ಗಳಿಗೆ ನೀಡುವ ಸಾಲದ ಬಡ್ಡಿ ದರವನ್ನು (ರೆಪೊ) ಇದುವರೆಗೆ ಮೂರು ಬಾರಿ ಕಡಿತ ಮಾಡಿದೆ.

ಕಡಿತದ ಒಟ್ಟಾರೆ ಪ್ರಮಾಣವು ಶೇ 0.75ರಷ್ಟಿದೆ. ಇದರಿಂದ ಗೃಹ, ವಾಹನ ಖರೀದಿ ಮತ್ತು ವೈಯಕ್ತಿಕ ಸಾಲಗಳು ಅಗ್ಗವಾಗಬೇಕಿತ್ತು. ಆದರೆ, ಬ್ಯಾಂಕ್‌ಗಳು ಮಾತ್ರ ಇದರ ಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ಹಿಂದೇಟು ಹಾಕುತ್ತಿವೆ.

ADVERTISEMENT

ಜೂನ್‌ ತಿಂಗಳ ಮುಂಚಿನ ಶೇ 0.50ರಷ್ಟು ದರ ಕಡಿತದ ಶೇ 0.21ರಷ್ಟನ್ನು ಮಾತ್ರ ಗ್ರಾಹಕರಿಗೆ ವರ್ಗಾಯಿಸಿವೆ.

‘ಬ್ಯಾಂಕ್‌ಗಳು ಈ ಹಿಂದೆ ದರ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು 6 ತಿಂಗಳ ಕಾಲಾವಕಾಶ ತೆಗೆದುಕೊಳ್ಳುತ್ತಿದ್ದವು. ಈಗ ಅದಕ್ಕಿಂತ ಕಡಿಮೆ ಅವಧಿ ಅಂದರೆ 2 ರಿಂದ 3 ತಿಂಗಳು ತೆಗೆದುಕೊಳ್ಳುತ್ತಿವೆ. ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದೆ’ ಎಂದು ದಾಸ್‌ ಹೇಳಿದ್ದಾರೆ.

ಬಜೆಟ್‌ ಮಂಡನೆ ನಂತರ ಸಾಂಪ್ರದಾಯಿಕವಾಗಿ ನಡೆಯುವ ಹಣಕಾಸು ಸಚಿವರ ಜತೆಗಿನ ಭೇಟಿ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.