ADVERTISEMENT

ವಿಡಿಯೊ ಮೂಲಕವೇ ದೃಢೀಕರಣ, ಇ–ಕೆವೈಸಿಗೆ ಪರ್ಯಾಯ: ಆರ್‌ಬಿಐ ಸಮ್ಮತಿ 

ಏಜೆನ್ಸೀಸ್
Published 10 ಜನವರಿ 2020, 7:02 IST
Last Updated 10 ಜನವರಿ 2020, 7:02 IST
ವಿಡಿಯೊ ಕೆವೈಸಿ
ವಿಡಿಯೊ ಕೆವೈಸಿ    

ನವದೆಹಲಿ:ಗ್ರಾಹಕ ಮಾಹಿತಿ ಪಡೆಯಲು (ಇ–ಕೆವೈಸಿ) ಪ್ರಸ್ತುತ ಚಾಲ್ತಿಯಲ್ಲಿರುವ ಕ್ರಮಗಳ ಹೊರತಾಗಿ ವಿಡಿಯೊ ಮೂಲಕ ದೃಢೀಕರಣ ಪಡೆಯುವ ವ್ಯವಸ್ಥೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಗುರುವಾರ ಸಮ್ಮತಿ ನೀಡಿದೆ. ಅಂಥ ಪರಿಶೀಲನಾ ವ್ಯವಸ್ಥೆಯು 'ಆಧಾರ್‌' ಆಧರಿಸಿರುತ್ತದೆ.

ಇ–ಕೆವೈಸಿ ನಡೆಸುವಾಗಲೂ ಗ್ರಾಹಕ ಖುದ್ದು ಹಾಜರಿರಬೇಕಾಗುತ್ತದೆ ಹಾಗೂ ಪ್ರಕ್ರಿಯೆಯು ಬಹಳಷ್ಟು ದತ್ತಾಂಶ ನಿರ್ವಹಣೆಯನ್ನೂ ಒಳಗೊಂಡಿರುತ್ತದೆ. ಆದರೆ, ವಿಡಿಯೊ–ಕೆವೈಸಿಯಲ್ಲಿ ಗ್ರಾಹಕ ಎಲ್ಲ ಪ್ರಕ್ರಿಯೆಗಳನ್ನೂ ವಿಡಿಯೊ ಚಾಟ್‌ ಮೂಲಕವೇ ಪೂರೈಸಿಕೊಳ್ಳಬಹುದು. ಅಗತ್ಯ ದಾಖಲೆಗಳನ್ನು ವಿಡಿಯೊದಲ್ಲಿಯೇ ತೋರಿಸಬಹುದಾಗಿದೆ.ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕುರಿತು ಸೆಬಿ ಮಾಜಿ ಅಧ್ಯಕ್ಷ ಯು.ಕೆ.ಸಿನ್ಹ ನೇತೃತ್ವದ ತಜ್ಞರ ಸಮಿತಿ ಸಲ್ಲಿಸಿದ್ದ ವರದಿಯಲ್ಲಿ 'ವಿಡಿಯೊ–ಕೆವೈಸಿ' ಅಗತ್ಯತೆ ಪ್ರಸ್ತಾಪಿಸಲಾಗಿತ್ತು.

ಗೂಗಲ್‌ ಡ್ಯೊ ಅಥವಾ ಆ್ಯಪಲ್‌ ಫೇಸ್‌ಟೈಮ್‌ ಅಪ್ಲಿಕೇಷನ್‌ಗಳ ಮೂಲಕ ವಿಡಿಯೊ–ಕೆವೈಸಿ ನಡೆಸಬಹುದು ಎಂದು ಸಮಿತಿ ಶಿಫಾರಸು ಮಾಡಿದೆ. 2019ರ ಜೂನ್‌ನಲ್ಲಿ ಸಮಿತಿ ವರದಿ ಪ್ರಸ್ತಾಪಿಸಿತ್ತು.

ADVERTISEMENT

ಗೂಗಲ್‌ ಮತ್ತು ಆ್ಯಪಲ್‌ ವಿದೇಶಿ ಮೂಲದ ಅಪ್ಲಿಕೇಷನ್‌ಗಳಾಗಿದ್ದು, ಆರ್‌ಬಿಐ ಅವುಗಳ ಬಳಕೆಗೆ ಅವಕಾಶ ನೀಡುವುದು ಅನುಮಾನ ಎಂದು ತಜ್ಞರು ಹೇಳಿದ್ದಾರೆ.ದತ್ತಾಂಶ ಸುರಕ್ಷತಾ ಮಸೂದೆ ಅಡಿಯಲ್ಲಿ ದೇಶದ ಗ್ರಾಹಕರಮಾಹಿತಿಯನ್ನು ವಿದೇಶದಲ್ಲಿ ಸಂಗ್ರಹಿಸಿಡಲು ಕಂಪನಿಗಳಿಗೆ ಆರ್‌ಬಿಐ ಅವಕಾಶ ನೀಡುವುದಿಲ್ಲ ಎನ್ನಲಾಗಿದೆ.

ವಿಡಿಯೊ ಮೂಲಕ ಗ್ರಾಹಕರನ್ನು ಗುರುತಿಸುವ ಪ್ರಕ್ರಿಯೆ(ವಿ–ಸಿಐಪಿ)‌ಯಲ್ಲಿ ವಿಡಿಯೊ ಚಾಟ್‌ಗಾಗಿ ಬಳಸಬಹುದಾದ ಅಪ್ಲಿಕೇಷನ್‌ ಕುರಿತು ಆರ್‌ಬಿಐ ಪ್ರಕಟಿಸಿರುವ ಸೂಚನೆಯಲ್ಲಿ ಪ್ರಸ್ತಾಪಿಸಿಲ್ಲ. ಸಮಿತಿಯ ಶಿಫಾರಸಿಗೆಆರ್‌ಬಿಐಸಮ್ಮತಿಸಿ ಕೆವೈಸಿ ಸೂಚನೆಗೆ ತಿದ್ದುಪಡಿ ಹೊರಡಿಸಿದೆ. ತಜ್ಞರ ಪ್ರಕಾರ, ಸರ್ಕಾರವು ವಿಡಿಯೊ ಚಾಟ್‌ಗಾಗಿ ಪ್ರತ್ಯೇಕ ಅಪ್ಲಿಕೇಷನ್‌ ಅಭಿವೃದ್ಧಿ ಪಡಿಸಬೇಕಿದೆ ಹಾಗೂ ದತ್ತಾಂಶ ಸಂಗ್ರಹಿಸುವ ಸರ್ವರ್‌ಗಳು ದೇಶದಲ್ಲಿಯೇ ಇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.