ADVERTISEMENT

RBI | ಬಡ್ಡಿದರ ಯಥಾಸ್ಥಿತಿ ಸಾಧ್ಯತೆ: ತಜ್ಞರ ಅಭಿಪ್ರಾಯ

ಪಿಟಿಐ
Published 5 ಡಿಸೆಂಬರ್ 2021, 11:54 IST
Last Updated 5 ಡಿಸೆಂಬರ್ 2021, 11:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕೊರೊನಾ ವೈರಾಣುವಿನ ಹೊಸ ರೂಪಾಂತರಿ ತಳಿ ಓಮೈಕ್ರಾನ್ ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿರುವ ಕಾರಣ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯು ಸೋಮವಾರದಿಂದ ಶುರುವಾಗಲಿದೆ.

ಆರ್‌ಬಿಐ ಗವರ್ನರ್‌ ನೇತೃತ್ವದ ಎಂಪಿಸಿ ಸಭೆ ಮೂರು ದಿನ ನಡೆಯಲಿದ್ದು, ಸಭೆಯ ನಿರ್ಧಾರಗಳುಬುಧವಾರ ಪ್ರಕಟವಾಗಲಿವೆ. ಅಕ್ಟೋಬರ್‌ನಲ್ಲಿ ನಡೆಸಿದ್ದ ಸಭೆಯಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಈ ಬಾರಿಯೂ ಆರ್‌ಬಿಐ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡರೆ ಒಟ್ಟಾರೆ ಒಂಭತ್ತು ಬಾರಿ ಯಥಾಸ್ಥಿತಿ ಕಾಯ್ದುಕೊಂಡಂತೆ ಆಗಲಿದೆ. 2020ರ ಮೇ 22ರಲ್ಲಿ ಆರ್‌ಬಿಐ ಬಡ್ಡಿದರಗಳಲ್ಲಿ ಬದಲಾವಣೆ ಮಾಡಿತ್ತು.

ಕೊರೊನಾದ ಹೊಸ ತಳಿಯಿಂದಾಗಿ ಅನಿಶ್ಚಿತ ವಾತಾವರಣ ನಿರ್ಮಾಣ ಆಗಿದ್ದು, ಆ ಕುರಿತು ಸ್ಪಷ್ಟತೆ ಸಿಗುವವರೆಗೂಬಡ್ಡಿದರಗಳ ನಿರ್ಧಾರದಲ್ಲಿ ಆರ್‌ಬಿಐ ಕಾದು ನೋಡುವ ಸಾಧ್ಯತೆ ಇದೆ ಎಂದು ಕೋಟಕ್‌ನ ಆರ್ಥಿಕ ಸಂಶೋಧನಾ ವರದಿ ತಿಳಿಸಿದೆ.

ADVERTISEMENT

ಯಥಾಸ್ಥಿತಿ ಅತ್ಯಗತ್ಯ: ರಿವರ್ಸ್‌ ರೆಪೊ ದರ ಹೆಚ್ಚಳದ ಮೂಲಕ ನಗದು ಲಭ್ಯತೆಯನ್ನು ಸಹಜ ಸ್ಥಿತಿಗೆ ತರುವ ನಿರ್ಧಾರವನ್ನು ಮುಂದೂಡಬೇಕು ಎಂದು ಎಸ್‌ಬಿಐನ ಆರ್ಥಿಕ ತಜ್ಞರು ಆರ್‌ಬಿಐಗೆ ಮನವಿ ಮಾಡಿದ್ದಾರೆ.

ಆರ್‌ಬಿಐ, ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ರಿವರ್ಸ್‌ ರೆಪೊ ದರದಲ್ಲಿ ಅಲ್ಪ ಏರಿಕೆ ಮಾಡುವ ನಿರೀಕ್ಷೆ ಇದೆ. ಆದಾಗ್ಯೂ ಆರ್ಥಿಕ ಚೇತರಿಕೆಗೆ ಓಮೈಕ್ರಾನ್‌ ತಳಿಯು ಅಡ್ಡಿಯಾಗಬಹುದು ಎನ್ನುವ ಕಾರಣಕ್ಕಾಗಿ ಸದ್ಯದ ಮಟ್ಟಿಗೆ ಆ ನಿರ್ಧಾರ ತಡೆಹಿಡಿಯುವ ಸಾಧ್ಯತೆಯೂ ಇದೆ. ಹೀಗಾಗಿ ಗೃಹ ಸಾಲ ಪಡೆಯುವವರು ಇನ್ನೂ ಕೆಲವು ಸಮಯದವರೆಗೆ ಕಡಿಮೆ ಬಡ್ಡಿ ದರದ ಪ್ರಯೋಜನ ಪಡೆದುಕೊಳ್ಳುವಂತೆ ಆಗಲಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್‌ನ ಅಧ್ಯಕ್ಷ ಅನುಜ್‌ ಪುರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.