
ಸಂಜಯ್ ಮಲ್ಹೋತ್ರಾ
ಪಿಟಿಐ ಚಿತ್ರ
ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಬೆಳವಣಿಗೆ ದರವು ಗರಿಷ್ಠ ಶೇ 8.2ಕ್ಕೆ ತಲುಪಿದ್ದು, ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ 25 ಮೂಲಾಂಶವನ್ನು ಶುಕ್ರವಾರ ಕಡಿತಗೊಳಿಸಿದೆ.
ಪ್ರಸಕ್ತ ಹಣಕಾಸು ವರ್ಷದ ಐದನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಘೋಷಿಸಿದ್ದಾರೆ. ರೆಪೊ ದರದಲ್ಲಿ 25 ಮೂಲಾಂಶದಷ್ಟು ಕಡಿತ ಮಾಡಿ ಶೇ 5.25ಕ್ಕೆ ಇಳಿಸಲು ಸರ್ವಾನುಮತದಿಂದ ನಿರ್ಧರಿಸಿದೆ ಎಂದೂ ಅವರೂ ಹೇಳಿದ್ದಾರೆ. ಇದರಿಂದ ವಸತಿ, ವಾಹನ ಮತ್ತು ವಾಣಿಜ್ಯ ಸಾಲಗಳು ಅಗ್ಗವಾಗುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.
ಜಾಗತಿಕ ರಾಜಕೀಯ ಬೆಳವಣಿಗೆಗಳು ಮತ್ತು ವ್ಯಾಪಾರ ವಹಿವಾಟಿನ ವಾತಾವರಣವು ಭಾರತದ ಹಣಕಾಸಿನ ಸ್ಥಿತಿಯನ್ನು ತೂಗುತ್ತಲೇ ಇವೆ. ನವೋದ್ಯಮದಲ್ಲಿ ಹಣದುಬ್ಬರುವ ನಿಯಂತ್ರಣದಲ್ಲಿದೆ. ಇದು ಹೊಂದಾಣಿಕೆಯ ಹಣಕಾಸು ನೀತಿಗೆ ಪೂರಕವಾಗಿದೆ.
ದೇಶದ ಆರ್ಥಿಕತೆಯು ಉತ್ತಮ ಬೆಳವಣಿಗೆಯ ಜತೆಗೆ, ಸ್ವಲ್ಪ ಹಣದುಬ್ಬರವನ್ನೂ ಕಂಡಿದೆ. ಅಕ್ಟೋಬರ್ ನೀತಿಯ ನಂತರ ಭಾರತದ ಆರ್ಥಿಕತೆಯು ತ್ವರಿತ ಹಣದುಬ್ಬರ ಕುಸಿತವನ್ನು ದಾಖಲಿಸಿತು. 2025ರ ಅಕ್ಟೋಬರ್‌ನಲ್ಲಿ ಹಣದುಬ್ಬರುವು ಶೇ 0.3ರಷ್ಟು ಕುಸಿದಿತ್ತು. ಜಿಎಸ್‌ಟಿ ದರಗಳ ಪರಿಷ್ಕರಣೆ ಮತ್ತು ಹಬ್ಬದ ವಹಿವಾಟಿನಿಂದ ಜಿಡಿಪಿಯು ಶೇ 8.2ಕ್ಕೆ ಏರಿತು ಎಂದು ಮಲ್ಹೋತ್ರಾ ಹೇಳಿದ್ದಾರೆ.
ಈ ಆರ್ಥಿಕ ವರ್ಷದಲ್ಲಿ ದೇಶದ ಬೆಳವಣಿಗೆಯು ಶೇ 7.3ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಮೂರನೇ ತ್ರೈಮಾಸಿದಲ್ಲಿ ಶೇ 7, ನಾಲ್ಕನೇ ತ್ರೈಮಾಸಿಕದಲ್ಲಿ ಶೇ 6.5 ಮತ್ತು ಮುಂದಿನ ಆರ್ಥಿಕ ವರ್ಷದ ಮೊದಲ ಹಾಗೂ 2ನೇ ತ್ರೈಮಾಸಿದಲ್ಲಿ ಕ್ರಮವಾಗಿ ಶೇ 6.7 ಮತ್ತು ಶೇ 6.5 ಎಂದು ಅವರು ಅಂದಾಜಿಸಿದ್ದಾರೆ.
ವಿಕಸನಗೊಳ್ಳುತ್ತಿರುವ ದ್ರವ್ಯತೆಯನ್ನು ಗಮನದಲ್ಲಿಟ್ಟುಕೊಂಡು, ವ್ಯವಸ್ಥೆಗೆ ಹೂಡಿಕೆ ಮೂಲಕ ದ್ರವ್ಯತೆ ತುಂಬಲು ರಿಸರ್ವ್ ಬ್ಯಾಂಕ್ ಈ ಡಿಸೆಂಬರ್‌ನಲ್ಲಿ ₹1 ಲಕ್ಷ ಕೋಟಿ ಮೌಲ್ಯದ ಸರ್ಕಾರಿ ಠೇವಣಿಯನ್ನು ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಮೂಲಕ ಖರೀದಿ ಹಾಗೂ 5 ಶತಕೋಟಿ ಅಮೆರಿಕನ್ ಡಾಲರ್‌ಗಳಷ್ಟು ರೂಪಾಯಿ ಖರೀದಿ ಮಾರಾಟ ವಿನಿಮಯವನ್ನು ಮೂರು ವರ್ಷಗಳ ಕಾಲ ನಡೆಸಲಿದೆ.
ಈ ಹಿಂದಿನ ಅಂಕಿಸಂಖ್ಯೆಯನ್ನು ಗಮನಿಸಿದರೆ ಈ ವರ್ಷ ಹಣದುಬ್ಬರವು ಶೇ 2ರಷ್ಟು ಇರಲಿದೆ. ಇದು ಈ ಹಿಂದೆ ಶೇ 2.6ರಷ್ಟಿತ್ತು.
ಕಳೆದ ವರ್ಷದ ಮೊದಲ ತ್ರೈಮಾಸಿಕದಿಂದ ನಿರಂತರವಾಗಿ ಏರುತ್ತಿದ್ದ ಮೂಲ ಹಣದುಬ್ಬರವು ಈ ವರ್ಷದ 2ನೇ ತ್ರೈಮಾಸಿಕದಲ್ಲಿ ಇಳಿಕೆಯ ಹಾದಿಯನ್ನು ಹಿಡಿದಿದೆ. ಅಮೂಲ್ಯ ಲೋಹಗಳ ಬೆಲೆಗಳ ಹೆಚ್ಚಳದ ಪರಿಣಾಮ ಸುಮಾರು 50 ಮೂಲಾಂಶ ಇರುವುದರಿಂದ ಹಣದುಬ್ಬರದ ಒತ್ತಡಗಳು ಇನ್ನೂ ಕಡಿಮೆಯಾಗುವ ಸಾಧ್ಯತೆಗಳಿವೆ. ಬೆಳವಣಿಗೆಯ ಸ್ಥಿತಿಯೂ ನಿಧಾನವಾಗಿ ಮೇಲೇರಲಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ಸರಕುಗಳ ಆಮದು ಹೆಚ್ಚಳವಾಗಿದೆ. ಹಾಗೆಯೇ ರಫ್ತು ಕುಗ್ಗಿದೆ. ಹೀಗಿದ್ದರೂ ಸೇವಾ ವಲಯದ ರಫ್ತು ಮತ್ತು ನಗದು ರವಾನೆಯಿಂದ ಚಾಲ್ತಿ ಖಾತೆ ಕೊರತೆ ಸಾಧಾರಣವಾಗಿ ಮುಂದುವರಿಯುವ ನಿರೀಕ್ಷೆ ಇದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.
ವರ್ಷದ ಆರಂಭದಲ್ಲಿ ವಿದೇಶಿ ವಿನಿಮಯ ಹೆಚ್ಚಿನ ವೇಗದಲ್ಲಿ ಬೆಳೆಯಿತು. ಹೆಚ್ಚಿನ ಒಳಹರಿವಿನ ಹೊರತಾಗಿಯೂ ವಾಪಾಸಾತಿ ಕಡಿಮೆಯಾದ ಕಾರಣ ನಿವ್ವಳ ವಿದೇಶಿ ವಿನಿಮಯ ಹೆಚ್ಚಾಗಿದೆ. 0.7 ಶತಕೋಟಿ ಅಮೆರಿಕನ್ ಡಾಲರ್ ಹೊರಗೆ ಹೋಗಿದೆ. ಇದು ಬಹುಮುಖ್ಯವಾಗಿ ಷೇರುಪೇಟೆಯಿಂದ ಆಗಿದೆ. ಇಸಿಬಿ ಮತ್ತು ಅನಿವಾಸಿ ಠೇವಣಿಯ ಹರಿವು ಮಧ್ಯಮವಾಗಿತ್ತು. ನ. 28ರವರೆಗೂ ಭಾರತದ ವಿದೇಶಿ ವಿನಿಮಯ ಸಂಗ್ರಹವು 686 ಶತಕೋಟಿ ಅಮೆರಿಕನ್ ಡಾಲರ್‌ನಷ್ಟಿತ್ತು. ಇದು ಕಳೆದ 11 ತಿಂಗಳಿಂದ ಹೆಚ್ಚಿನ ಆಮದು ಭದ್ರತೆ ಒದಗಿಸಿದೆ ಎಂದು ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.