ADVERTISEMENT

ಹಣದುಬ್ಬರ ತಗ್ಗಿಸಲು ಕಸರತ್ತು: ರೆಪೊ ದರ ಇಳಿಕೆ ಸಾಧ್ಯತೆಗಳ ತೆರೆದಿಟ್ಟ RBI

ಪಿಟಿಐ
Published 4 ಅಕ್ಟೋಬರ್ 2025, 11:07 IST
Last Updated 4 ಅಕ್ಟೋಬರ್ 2025, 11:07 IST
ಆರ್‌ಬಿಐ
ಆರ್‌ಬಿಐ   

ಕೋಲ್ಕತ್ತ: ಭವಿಷ್ಯದಲ್ಲಿ ಹಣದುಬ್ಬರ ತಗ್ಗಿಸುವ ನಿಟ್ಟಿನಲ್ಲಿ ವಿತ್ತೀಯ ನೀತಿ ಸಮಿತಿಯು ದರ ಪರಿಷ್ಕರಣೆಗೆ ತೀವ್ರವಾಗಿ ಕಸರತ್ತು ನಡೆಸಿರುವುದರಿಂದ ಮುಂದಿನ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರ ಕಡಿತ ಮಾಡುವ ಸಾಧ್ಯತೆ ಇದೆ ಎಂದು ಕ್ರಿಸಿಲ್ ಇಂಟೆಲಿಜೆನ್ಸ್‌ನ ವರದಿ ತಿಳಿಸಿದೆ.

ಅಕ್ಟೋಬರ್ 1ರಂದು ರೆಪೊ ದರವನ್ನು (ಶೇ 5.5) ಆರ್‌ಬಿಐ ಯಥಾಸ್ಥಿತಿಯನ್ನು ಕಾಯ್ದುಕೊಂಡಿತು. ಇಂಥ ಪ್ರಯತ್ನ ನಡೆದಿದ್ದು ಸತತ ಎರಡನೇ ಬಾರಿ.

ಅಮೆರಿಕದ ಅಧಿಕ ಸುಂಕದ ಪರಿಣಾಮದಿಂದ ಪ್ರಸಕ್ತ ಆರ್ಥಿಕ ವರ್ಷದ ಎರಡನೇ ಭಾಗದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಇಳಿಕೆಯಾಗಬಹುದು. ಆದರೂ ಜಿಎಸ್‌ಟಿ ಪರಿಷ್ಕರಣೆಯು ಒಟ್ಟಾರೆ ಪರಿಣಾಮವನ್ನು ಭಾಗಶಃ ಸರಿದೂಗಿಸುತ್ತದೆ ಎಂದು ಹೇಳಿದೆ.

ADVERTISEMENT

ಅಮೆರಿಕದ ಸುಂಕದಿಂದ ಕೆಲವು ಕಾರ್ಮಿಕ ಕೇಂದ್ರಿತ ವಲಯಗಳ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡಲಿದೆ. ಈ ವಲಯಗಳಿಗೆ ನೆರವು ಅಗತ್ಯ. ಹಣದುಬ್ಬರ ಇಳಿಕೆಯಾಗುತ್ತಿದೆ. ಅಲ್ಲದೆ, ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿ ದರ ಕಡಿತವು, ಆರ್‌ಬಿಐ ರೆಪೊ ದರ ಕಡಿತಕ್ಕೆ ಅವಕಾಶ ಮಾಡಿಕೊಡಲಿದೆ ಎಂದು ಹೇಳಿದೆ.

ಜಿಎಸ್‌ಟಿ ಪರಿಷ್ಕರಣೆಯ ಇತ್ತೀಚಿನ ನಿರ್ಧಾರಗಳಿಂದ ಹಣದುಬ್ಬರ ನಿಯಂತ್ರಣಕ್ಕೆ ಭಾಗಶಃ ನೆರವಾಗಿದೆ. ಫೆಬ್ರುವರಿಯಿಂದ ಆರ್‌ಬಿಐ ಶೇ 1ರಷ್ಟು ರೆಪೊ ದರ ಕಡಿತ ಮಾಡಿದೆ. ಜೂನ್‌ನಲ್ಲಿ 100 ಅಂಶಗಳಷ್ಟು ಕಡಿತ ಮಾಡಿತ್ತು. ನಂತರ 50 ಅಂಶಗಳಿಗೆ ತಗ್ಗಿಸಿತು. ಇದರಿಂದ ರೆಪೊ ದರ ಶೇ 5.5ರಲ್ಲಿದೆ.

ಚಿಲ್ಲರೆ ಕ್ಷೇತ್ರದ ಹಣದುಬ್ಬರದಿಂದ ಗ್ರಾಹಕ ಬೆಲೆ ಸೂಚ್ಯಂಕವು ಶೇ 4ರಲ್ಲಿದೆ. ಇದು ಶೇ 2ರಷ್ಟು ಆಚೀಚೆಯೂ ಆಗಬಹುದು ಎಂದು ಕ್ರಿಸಿಲ್ ಇಂಟೆಲಿಜೆನ್ಸ್‌ ಅಂದಾಜಿಸಿದೆ.

ವಿತ್ತೀಯ ನೀತಿ ಸಮಿತಿಯ ಶಿಫಾರಸಿನಂತೆ ಫೆಬ್ರುವರಿ ಮತ್ತು ಏಪ್ರಿಲ್‌ನಲ್ಲಿ ತಲಾ 25 ಅಂಶಗಳಷ್ಟು ರೆಪೊ ದರವನ್ನು ಆರ್‌ಬಿಐ ಇಳಿಸಿತ್ತು. ಅದರಂತೆಯೇ ಚಿಲ್ಲರೆ ಹಣದುಬ್ಬರ ಪ್ರಮಾಣವು ಕಳೆದ ಫೆಬ್ರುವರಿಯಲ್ಲಿ ಶೇ 4ರಷ್ಟಿತು. ಇದು ಆಹಾರ ಬೆಲೆಗಳ ಸುಗಮಗೊಳಿಸುವ ಪೂರಕ ಕ್ರಮವಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.