ADVERTISEMENT

ಪಟ್ಟಣ ಸಹಕಾರಿ ಬ್ಯಾಂಕ್‌: ಉನ್ನತ ಹುದ್ದೆಗೆ ಸಂಸದರು, ಶಾಸಕರಿಗೆ ನಿರ್ಬಂಧ

ಪಿಟಿಐ
Published 26 ಜೂನ್ 2021, 19:45 IST
Last Updated 26 ಜೂನ್ 2021, 19:45 IST
ಆರ್‌ಬಿಐ
ಆರ್‌ಬಿಐ   

ಮುಂಬೈ: ಸಂಸತ್‌ ಸದಸ್ಯರು ಮತ್ತು ಶಾಸಕರು, ಪಟ್ಟಣ ಸಹಕಾರಿ ಬ್ಯಾಂಕ್‌ಗಳ ವ್ಯವಸ್ಥಾಪಕ ನಿರ್ದೇಶಕರು (ಎಂಡಿ) ಮತ್ತು ಪೂರ್ಣಾವಧಿ ನಿರ್ದೇಶಕರ (ಡಬ್ಲ್ಯುಟಿಡಿ) ಹುದ್ದೆಗೇರುವುದನ್ನು ನಿಷೇಧಿಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಶೈಕ್ಷಣಿಕ ಅರ್ಹತೆ ಮತ್ತು ವಯೋಮಾನದ ಕುರಿತು ಹೊರಡಿಸಿರುವ ಮಾರ್ಗಸೂಚಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ಈ ಹುದ್ದೆಗಳನ್ನು ನಿರ್ವಹಿಸುವವರ ವಯಸ್ಸು ಕನಿಷ್ಠ 35 ವರ್ಷ ಹಾಗೂ ಗರಿಷ್ಠ 70 ವರ್ಷ ಎಂದು ನಿಗದಿಪಡಿಸಲಾಗಿದೆ. ಸ್ನಾತಕೋತ್ತರ ಪದವಿ ಅಥವಾ ಹಣಕಾಸು ವಿಷಯವನ್ನು ಓದಿರುವುದು ಕಡ್ಡಾಯ. ಲೆಕ್ಕ/ವೆಚ್ಚ ಪರಿಶೋಧಕ, ಹಣಕಾಸು ವಿಷಯದಲ್ಲಿ ಎಂಬಿಎ ಅಥವಾ ಬ್ಯಾಂಕಿಂಗ್‌ ಅಥವಾ ಕೊ ಆಪರೇಟಿವ್ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಧ್ಯಮ/ ಹಿರಿಯ ವ್ಯವಸ್ಥಾಪಕ ಮಟ್ಟದ ಹುದ್ದೆ (ನಗರ ಸಹಕಾರಿ ಬ್ಯಾಂಕ್‌ನ ಅನುಭವವೂ ಒಳಗೊಂಡು) ಅಥವಾ ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿ ಸಾಲ ನೀಡುವ ಮತ್ತು ಸ್ವತ್ತು ನಿರ್ವಹಣೆಯಲ್ಲಿ ಕನಿಷ್ಠ ಎಂಟು ವರ್ಷಗಳ ಅನುಭವವನ್ನು ಹೊಂದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಈ ಹುದ್ದೆಗಳಿಗೆ ಗರಿಷ್ಠ 5 ವರ್ಷಗಳ ಅವಧಿಗೆ ನೇಮಕ ಮಾಡಬಹುದು. ಆ ಬಳಿಕ ಮರು ನೇಮಕಕ್ಕೆ ಅವಕಾಶ ಇದೆ. ಆದರೆ, ವ್ಯವಸ್ಥಾಪಕ ನಿರ್ದೇಶಕ ಅಥವಾ ಪೂರ್ಣಾವಧಿಯ ನಿರ್ದೇಶಕ 15ಕ್ಕಿಂತಲೂ ಹೆಚ್ಚಿನ ವರ್ಷಗಳ ಅವಧಿಗೆ ಹುದ್ದೆಯಲ್ಲಿ ಇರಬಾರದು. ಆ ಬಳಿಕವೂ ಅಗತ್ಯ ಇದ್ದರೆ ಮೂರು ವರ್ಷಗಳ ವಿರಾಮದ ಬಳಿಕ ಮರುನೇಮಕ ಮಾಡಬಹುದು.

ಎಂಡಿ ಅಥವಾ ಸಿಇಒಗಳ ಐದು ವರ್ಷಗಳ ಅವಧಿ ಪೂರ್ಣಗೊಂಡಿದ್ದರೆ, ಹೊಸ ಮಾರ್ಗಸೂಚಿಯ ಅನ್ವಯ ಅರ್ಹತೆ ಹೊಂದಿದ್ದಲ್ಲಿ ಮರುನೇಮಕಕ್ಕೆ ಆರ್‌ಬಿಐಗೆ ಮನವಿ ಸಲ್ಲಿಸಬಹುದು ಇಲ್ಲವೇ ಎರಡು ತಿಂಗಳ ಒಳಗೆ ಹೊಸ ಎಂಡಿ/ಸಿಇಒ ನೇಮಕ ಮಾಡಬೇಕು. ಒಂದೊಮ್ಮೆ ಅವಧಿ ಮುಗಿಯುವ ಮುನ್ನವೇ ವ್ಯವಸ್ಥಾಪಕ ನಿರ್ದೇಶಕ ಅಥವಾ ಪೂರ್ಣಾವಧಿಯ ನಿರ್ದೇಶಕರನ್ನು ಅಧಿಕಾರದಿಂದ ವಜಾ ಮಾಡುವುದಿದ್ದರೆ ಆರ್‌ಬಿಐನ ಪೂರ್ವಾನುಮತಿ ಪಡೆಯಬೇಕು.

ವಿಪತ್ತು ನಿರ್ವಹಣೆ ಅಧಿಕಾರಿ: ₹ 5 ಸಾವಿರ ಕೋಟಿಗಿಂತಲೂ ಅಧಿಕ ಆಸ್ತಿ ಮೌಲ್ಯ ಹೊಂದಿರುವ ಪಟ್ಟಣ ಸಹಕಾರಿ ಬ್ಯಾಂಕ್‌ಗಳಿಗೆ ಮುಖ್ಯ ವಿಪತ್ತು ನಿರ್ವಹಣೆ ಅಧಿಕಾರಿಯ ನೇಮಕವನ್ನು ಆರ್‌ಬಿಐ ಕಡ್ಡಾಯಗೊಳಿಸಿದೆ. ಈ ಅಧಿಕಾರಿಯು ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಅವರ ಪಾತ್ರ ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವಿವರಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.