ADVERTISEMENT

ಚಿಲ್ಲರೆ ಹಣದುಬ್ಬರ: 4 ತಿಂಗಳ ಕನಿಷ್ಠಕ್ಕೆ ಇಳಿಕೆ

ಪಿಟಿಐ
Published 13 ಜನವರಿ 2025, 15:39 IST
Last Updated 13 ಜನವರಿ 2025, 15:39 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಚಿಲ್ಲರೆ ಹಣದುಬ್ಬರವು ಡಿಸೆಂಬರ್‌ ತಿಂಗಳಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಶೇ 5.22ರಷ್ಟಾಗಿದೆ. 

ಚಿಲ್ಲರೆ ಹಣದುಬ್ಬರವು 2024ರ ನವೆಂಬರ್‌ನಲ್ಲಿ ಶೇ 5.48ರಷ್ಟು ದಾಖಲಾಗಿತ್ತು. ತರಕಾರಿಗಳು ಸೇರಿದಂತೆ ಆಹಾರ ಪದಾರ್ಥಗಳ ದರ ಇಳಿಕೆಯಿಂದ ಹಣದುಬ್ಬರವು ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಅಂಕಿ ಅಂಶಗಳು ಸೋಮವಾರ ತಿಳಿಸಿವೆ. 2023ರ ಡಿಸೆಂಬರ್‌ನಲ್ಲಿ ಶೇ 5.69ರಷ್ಟಿತ್ತು.

ನವೆಂಬರ್‌ನಲ್ಲಿ ಆಹಾರ ಪದಾರ್ಥಗಳ ಹಣದುಬ್ಬರವು ಶೇ 9.04ರಷ್ಟಿತ್ತು. ಇದು ಡಿಸೆಂಬರ್‌ನಲ್ಲಿ ಶೇ 8.39ಕ್ಕೆ ಇಳಿದಿದೆ. 

ADVERTISEMENT

ಆದರೆ, 2023ರ ಡಿಸೆಂಬರ್‌ಗೆ ಹೋಲಿಸಿದರೆ 2024ರ ಡಿಸೆಂಬರ್‌ನಲ್ಲಿ ಅವರೆಕಾಳು ಹಣದುಬ್ಬರ ದರವು ಶೇ 89.12ರಷ್ಟು ಹೆಚ್ಚಳವಾಗಿದೆ. ಆಲೂಗೆಡ್ಡೆ (ಶೇ 68), ಬೆಳ್ಳುಳ್ಳಿ (ಶೇ 58), ತೆಂಗಿನ ಎಣ್ಣೆ (ಶೇ 45) ಮತ್ತು ಹೂಕೋಸು ಶೇ 39ರಷ್ಟು ಏರಿಕೆಯಾಗಿದೆ. 

ಇದೇ ಅವಧಿಯಲ್ಲಿ ಜೀರಾ, ಶುಂಠಿ, ಒಣಮೆಣಸಿನಕಾಯಿ ದರದಲ್ಲಿ ಇಳಿಕೆಯಾಗಿದೆ. 

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ಚಿಲ್ಲರೆ ಹಣದುಬ್ಬರದ ತಾಳಿಕೆ ಮಟ್ಟವನ್ನು ಕನಿಷ್ಠ 2ರಷ್ಟು ಹಾಗೂ ಗರಿಷ್ಠ 6ಕ್ಕೆ ನಿಗದಿಪಡಿಸಿದೆ. ಈ ಮಟ್ಟಕ್ಕಿಂತಲೂ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದೆ. ಹಾಗಾಗಿ, ಮುಂದಿನ ಸಭೆಯು ರೆಪೊ ದರದ ಕಡಿತಕ್ಕೆ ಮುಂದಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಮುಂದಿನ ಎಂಪಿಸಿ ಸಭೆ ಫೆಬ್ರುವರಿಯಲ್ಲಿ ನಡೆಯಲಿದೆ.

ಗ್ರಾಮೀಣ ಪ್ರದೇಶದಲ್ಲಿ ಚಿಲ್ಲರೆ ಹಣದುಬ್ಬರವು ಶೇ 5.76ರಷ್ಟು ಹಾಗೂ ನಗರ ಪ್ರದೇಶದಲ್ಲಿ ಶೇ 4.58ರಷ್ಟು ದಾಖಲಾಗಿದೆ. ರಾಜ್ಯಗಳ ಪೈಕಿ ಹಣದುಬ್ಬರ ಛತ್ತೀಸಗಢದಲ್ಲಿ ಅತಿಹೆಚ್ಚು ಶೇ 7.63ರಷ್ಟಿದ್ದರೆ, ದೆಹಲಿಯಲ್ಲಿ ಕನಿಷ್ಠ ಶೇ 2.51ರಷ್ಟು ಇದೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.