ADVERTISEMENT

ನಿವೃತ್ತಿ ನಂತರ ಮುಂದೇನು? ಮಧ್ಯಮ ವರ್ಗದ ಈ ಚಿಂತೆಗೆ ಪರಿಹಾರ ಏನು?

ಭುವನಹಳ್ಳಿ ಭಾನುಪ್ರಕಾಶ್
Published 16 ಫೆಬ್ರುವರಿ 2026, 4:34 IST
Last Updated 16 ಫೆಬ್ರುವರಿ 2026, 4:34 IST
   

ಭಾರತದ 146 ಕೋಟಿ ಜನಸಂಖ್ಯೆಯಲ್ಲಿ ಶೇ 31ರಷ್ಟಿರುವ ಮಧ್ಯಮ ವರ್ಗದ ಕುಟುಂಬಗಳಿಗೆ ವೈಯಕ್ತಿಕ ಹಣಕಾಸಿನ ಬಗ್ಗೆ ಅರಿವಿದೆ. ಇದು ಕೇವಲ ಸರ್ಕಾರದ ವರದಿಯ ಅಂಕಿ–ಅಂಶಗಳ ವಿಷಯವಲ್ಲ. ದಿಢೀರನೆ ದುಡ್ಡು ಮಾಡುವ ಆಸೆಯ ಷೇರು ಮಾರುಕಟ್ಟೆಯ ಚರ್ಚೆಯೂ ಅಲ್ಲ. ಮನೆಯವರೆಲ್ಲಾ ಕುಳಿತು ಊಟ ಮಾಡುತ್ತಾ, ಮಾತನಾಡುವಾಗ ಬರುವ ಸಾಮಾನ್ಯ ಪ್ರಶ್ನೆ.‘ಈಗ ಬರುತ್ತಿರುವ ಸಂಬಳ ನಿಂತಮೇಲೆ ನಮ್ಮ ಬದುಕು ನಡೆಯುವುದು ಹೇಗೆ?’

ಭಾರತದಲ್ಲಿರುವ ಸುಮಾರು 40 ಕೋಟಿ ಉದ್ಯೋಗಸ್ಥರಲ್ಲಿ ಕೇವಲ 3.5 ಕೋಟಿ ಜನರಿಗೆ ಮಾತ್ರ ನಿವೃತ್ತಿ ಅಥವಾ ಪಿಂಚಣಿ ವ್ಯವಸ್ಥೆ ಇದೆ. ಅಂದರೆ ಶೇ 90 ಕ್ಕೂ ಹೆಚ್ಚು ಜನರು ತಮ್ಮ ನಿವೃತ್ತಿಯ ನಂತರ ಅಥವಾ ವೃದ್ಧಾಪ್ಯವನ್ನು ಯಾವುದೇ ವ್ಯವಸ್ಥಿತ ಭದ್ರತೆಯಿಲ್ಲದೆ ಎದುರಿಸಬೇಕಾಗಿದೆ. ಈ 3.5 ಕೋಟಿಯಲ್ಲಿ ಸುಮಾರು 1.1 ಕೋಟಿ ಸರ್ಕಾರಿ ನೌಕರರು ಹಾಗೂ 2.4 ಕೋಟಿ ಖಾಸಗಿ ನೌಕರರು ಕಾರ್ಮಿಕರ ಭವಿಷ್ಯ ನಿಧಿ (EPFO) ವ್ಯಾಪ್ತಿಯಲ್ಲಿರುವ ಉದ್ಯೋಗಿಗಳು ಮಾತ್ರ ಸೇರುತ್ತಾರೆ. ಉಳಿದ ಬಹುಸಂಖ್ಯೆಯ ಮಧ್ಯಮ ವರ್ಗದ ಕುಟುಂಬಗಳಿಗೆ ನಿವೃತ್ತಿ ಭದ್ರತೆಯೇ ಇಲ್ಲ.

ಲೆಕ್ಕಾಚಾರದಿಂದಲೇ ಬದುಕುತ್ತಿರುವ ಮಧ್ಯಮ ವರ್ಗದ ಕುಟುಂಬಗಳಲ್ಲಿ ಹೇಳಲಾಗದೇ ಉಳಿದಿರುವ ಬಹುಮುಖ ಕಥೆಗಳಿವೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರು, ಶಾಲಾ ಶಿಕ್ಷಕರು, ಗುತ್ತಿಗೆ ಆಧಾರದ ಎಂಜಿನಿಯರ್‌‌ಗಳು, ಕಚೇರಿಯಲ್ಲಿ ಕೆಲಸ ಮಾಡುವ ತಂತ್ರಜ್ಞರು; ಹೀಗೆ ಎಲ್ಲರ ಬದುಕಿನ ಕಥೆಯೂ ಒಂದೇ ಆಗಿರುತ್ತದೆ. ಬರುವ ಸಂಬಳದಿಂದ ಮನೆ ನಡೆಸುವುದು, ಮಕ್ಕಳ ಶಿಕ್ಷಣ, ವೃದ್ಧ ತಂದೆ–ತಾಯಿಯಯರ ಆರೈಕೆ– ಇವಕ್ಕೇ ಹೆಚ್ಚಿನ ಹಣ ಖರ್ಚು ಮಾಡಿದರೆ ತಿಂಗಳ ಕೊನೆಯಲ್ಲಿ ಹಣ ಉಳಿಸುವುದು ಹೇಗೆ?ಆದರೆ ಈ ಘಳಿಗೆಯಲ್ಲೂ ‘ನಿವೃತ್ತಿಯ ಯೋಜನೆ ಮಾಡಲೇಬೇಕು‘ ಎನ್ನುವ ಒತ್ತಡ ಮಾತ್ರ ಎಲ್ಲರಲ್ಲೂ ಇದ್ದೆ ಇರುತ್ತದೆ.

ADVERTISEMENT

ಸಂಘಟಿತ ವಲಯದಲ್ಲಿರುವ ಕೆಲವಷ್ಟು ನೌಕರರು ಅದೃಷ್ಟಶಾಲಿಗಳು. ಏಕೆಂದರೆ, ಅವರಿಗೆ ನಿವೃತ್ತಿಯ ಭದ್ರತೆಗೆ ಕಡ್ಡಾಯ ಉಳಿತಾಯ ಮತ್ತು ಪಿಂಚಣಿ ಯೋಜನೆಗಳ ಮೂಲಕ ಸಿಗುತ್ತದೆ. ಆದರೆ ಖಾಸಗಿ ಸಂಘಟಿತ ವಲಯದಲ್ಲಿ ಉದ್ಯೋಗಿಯ ಮತ್ತು ಉದ್ಯೋಗದಾತರ ಕೊಡುಗೆಯೂ ಸೇರಿ ಅವನ ಸಂಬಳದ ಶೇ 20 ರಿಂದ 24 ರಷ್ಟು ಅವನ ನಿವೃತ್ತಿಯ ನಿಧಿಗೆ ಹೋಗುತ್ತದೆ. ಇದರಲ್ಲಿ ಉದ್ಯೋಗದಾತನ ಕೊಡುಗೆಯಲ್ಲಿ ಶೇ 8.33 ಪಿಂಚಣಿ ಯೋಜನೆಗೆ, ಮತ್ತು ಶೇ‌ 3.67 ಭವಿಷ್ಯ ನಿಧಿಗೆ ಹೋಗುತ್ತದೆ. ಸ್ವಯಂ ಪ್ರೇರಿತ ಭವಿಷ್ಯ ನಿಧಿ (VPF) ಎಂಬ ಮತ್ತೊಂದು ಅವಕಾಶವಿದೆ. ಇದರಲ್ಲಿ, ಉದ್ಯೋಗಿಗಳು ಶೇ 12 ಕ್ಕಿಂತ ಹೆಚ್ಚು ಕೊಡುಗೆ ನೀಡಬಹುದು. ಆದರೆ ಇದಕ್ಕೆ ಉದ್ಯೋಗದಾತನ ಕೊಡುಗೆ ಇರುವುದಿಲ್ಲ. ಮೇಲ್ನೋಟಕ್ಕೆ ಈ ಎಲ್ಲಾ ರೀತಿಯ ಉಳಿತಾಯ ಮತ್ತು ಹೂಡಿಕೆ ದೊಡ್ಡದಾಗಿ ಕಾಣಬಹುದು. ಆದರೆ ದಿನನಿತ್ಯದ ಖರ್ಚುಗಳನ್ನು ನಿಭಾಯಿಸುತ್ತಿರುವ ಮಧ್ಯಮ ವರ್ಗದ ಕುಟುಂಬಕ್ಕೆ ಸಂಬಳದಿಂದ ಕಡಿತವಾಗುವ ಪ್ರತಿಯೊಂದು ರೂಪಾಯಿಯೂ ಅವನು ಮಾಡುವ ತ್ಯಾಗವೇ ಸರಿ.

ಬಹುತೇಕ ಮನೆಗಳಲ್ಲಿ ಭವಿಷ್ಯ ನಿಧಿ (ಪಿಎಫ್‌) ಹಣವನ್ನು ‘ನಿವೃತ್ತಿಯ ಹಣ‘ ಎಂದು ಭಾವಿಸುವುದಿಲ್ಲ. ಅದು ಮನೆ ಕಟ್ಟಲು, ಪೋಷಕರಿಗೆ ಭರಿಸುವ ಅನಿರೀಕ್ಷಿತ ಆಸ್ಪತ್ರೆ ಖರ್ಚಿಗೆ ಇರುವ ಉಳಿತಾಯ ಎಂದು ನಂಬಿದ್ದಾರೆ. ಇನ್ನೂ ಕೆಲವರು ಉದ್ಯೋಗ ಕಳೆದುಕೊಂಡರೆ, ಮುಂದಿನ ಕೆಲವು ತಿಂಗಳು ಬದುಕಲು ಸಾಕಾಗುವ ಹಣವೆಂದು ತಿಳಿದಿದ್ದಾರೆ. ಪಿಎಫ್‌ ಹಣವನ್ನು ಈ ಕಾರಣಗಳಿಗೆ ಉಪಯೋಗಿಸುವುದು ಅವರಲ್ಲಿಯ ಹಣಕಾಸಿನ ಶಿಸ್ತಿನ ಕೊರತೆಯಿಂದಲ್ಲ, ಅವರಿಗೆ ಸಮಾಜದಲ್ಲಿ ಬಲವಾದ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ಎನ್ನಬಹುದು.

ಅನಾರೋಗ್ಯಕ್ಕೀಡಾಗಿರುವ ತಂದೆ–ತಾಯಿಯನ್ನು ಪೋಷಿಸುತ್ತಿರುವ ಸಾವಿರಾರು ಮಧ್ಯಮ ವರ್ಗದ ಕುಟುಂಬಗಳಲ್ಲಿ ಈ ರೀತಿಯ ನಡವಳಿಕೆಗಳು ಸರ್ವೇ ಸಾಮಾನ್ಯ. ಪಿಂಚಣಿಯ ಸೌಲಭ್ಯವಿರದ ಹೆಚ್ಚಿನ ತಂದೆ–ತಾಯಿಯರು ತಮ್ಮ ಮಕ್ಕಳ ಸಂಬಳದ ಮೇಲೆ ಅವಲಂಬಿತರಾಗುತ್ತಾರೆ. ಅವರು ತಮ್ಮ ಜೀವನದ ಉಳಿತಾಯವನ್ನೆಲ್ಲ ಮಕ್ಕಳ ಶಿಕ್ಷಣ ಮತ್ತು ಮದುವೆಗಾಗಿ ಖರ್ಚುಮಾಡಿರುತ್ತಾರೆ. ಆದರೆ ಈಗ ಆ ಹೊಣೆಗಾರಿಕೆ ಹೊಸ ಪೀಳಿಗೆಯ ಮೇಲೆ ಬಿದ್ದಿದೆ – ಈಗಾಗಲೇ ಸಾಲ, ಇಎಂಐ ಮತ್ತು ಜೀವನ ವೆಚ್ಚಗಳಿಂದ ನಲುಗುತ್ತಿರುವ ಈ ಪೀಳಿಗೆಯವರಿಗೆ, ಅವರ ಮನೆಗಳಲ್ಲಿ ನಿವೃತ್ತಿ ಯೋಜನೆ ಎನ್ನುವುದು ಕೇವಲ ಭವಿಷ್ಯದ ಚಿಂತೆಯಾಗಿರದೇ ಅದು ಪ್ರತಿನಿತ್ಯ ಕಾಡುವ ಭವಿಷ್ಯದ ಭೂತವಾಗಿದೆ.

ಈ ಹಿನ್ನೆಲೆಯಲ್ಲೇ ದೇಶದಾದ್ಯಂತ ಪಿಂಚಣಿ ಸುಧಾರಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಆರ್ಥಿಕವಾಗಿ ನೋಡಿದರೆ ಸರ್ಕಾರಗಳು ಈ ರೀತಿಯ ಅಪಾಯವನ್ನು ತಮ್ಮಿಂದ ನೌಕರನು ದುಡಿಯುವ ಸಂಸ್ಥೆಯ ಕಡೆಗೆ ಬೆರಳು ಮಾಡಿ ತೋರಿಸಿದರೆ, ಸಂಸ್ಥೆಯು ದುಡಿಯುವ ನೌಕರನ ಕಡೆಗೆ ಜಾರಿಸುವ ತಂತ್ರವನ್ನು ಪಾಲಿಸುತ್ತಿದೆ. ಇದು ಮಧ್ಯಮ ವರ್ಗಕ್ಕೆ ನಿವೃತ್ತಿ ನಂತರದ ದಿನಗಳ ಬಗ್ಗೆ ಅನಿಶ್ಚಿತತೆ ಮೂಡಿಸುತ್ತಿದೆ.

ಸಾಮೂಹಿಕ ಪಿಂಚಣಿ ವ್ಯವಸ್ಥೆಯಲ್ಲಿ ಹೂಡಿಕೆ ನಷ್ಟ ಮತ್ತು ಅಪಾಯವನ್ನು ಸಂಸ್ಥೆಗಳು ಹೊರುತ್ತವೆ. ಆದರೆ, ವೈಯಕ್ತಿಕ ಖಾತೆಗಳಲ್ಲಿ ಈ ಎಲ್ಲಾ ಅಪಾಯಗಳು ನೇರವಾಗಿ ಉದ್ಯೋಗಿಯ ಮೇಲೆಯೇ ಬೀಳುತ್ತಿವೆ. ನಿವೃತ್ತಿಯ ಸಮಯದಲ್ಲಿ ಮಾರುಕಟ್ಟೆ ಕುಸಿದರೆ, ತಾನು ಜೀವನಪೂರ್ತಿ ಉಳಿಸಿ ಹೂಡಿಕೆ ಮಾಡಿದ ಮೊತ್ತದಿಂದ ಬರುವ ಆದಾಯವೇ ಕಡಿಮೆಯಾಗುವ ಭಯವಿದೆ. ಇದು ಇತರ ಆದಾಯವಿಲ್ಲದೆ ಕೇವಲ ಸಂಬಳ ನಂಬಿಕೊಂಡಿರುವ ಬಹುತೇಕ ಕುಟುಂಬಗಳಿಗೆ, ಅವರ ಆರ್ಥಿಕ ಭವಿಷ್ಯಕ್ಕೆ ದೊಡ್ಡ ಹೊಡೆತವೇ ಆಗಿದೆ.

ಮತ್ತೊಂದು ನೋವಿನ ಸಂಗತಿ ಎಂದರೆ, ನಿವೃತ್ತಿ ಉಳಿತಾಯಕ್ಕೆ ನೀಡುವ ತೆರಿಗೆ ಸೌಲಭ್ಯಗಳು ಹೆಚ್ಚಾಗಿ ಅಧಿಕ ಆದಾಯದವರಿಗೆ ಮಾತ್ರ ಲಾಭ ಕೊಡುತ್ತವೆ. ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಉಳಿತಾಯ ಮಾಡುವ ಸಾಮರ್ಥ್ಯ ಕಡಿಮೆ ಇರುವುದರಿಂದ, ಈ ಸೌಲಭ್ಯಗಳು ಅವರಿಗೆ ತಲುಪುವುದಿಲ್ಲ. ಇದರ ಪರಿಣಾಮವಾಗಿ, ಸರ್ಕಾರಗಳ ಸಹಾಯ ಅಗತ್ಯವಿರುವವರಿಗಿಂತ, ಈಗಾಗಲೇ ಸುರಕ್ಷಿತರಾಗಿರುವವರ ಕೈಗೆ ಹೆಚ್ಚು ಹೋಗುತ್ತದೆ ಎನ್ನುವ ಆರೋಪದಲ್ಲಿ ನಿಜವಿದೆ. ಇವೆಲ್ಲಕ್ಕಿಂತ ದೊಡ್ಡ ಸಮಸ್ಯೆ ಎಂದರೆ, ಬಡ ಮತ್ತು ಕಡಿಮೆ ಆದಾಯದ ಹೊಂದಿರುವ ವೃದ್ಧರಿಗೆ ಖಚಿತವಾದ ಮೂಲ ಪಿಂಚಣಿ ವ್ಯವಸ್ಥೆಯ ಕೊರತೆ. ಹಾಗಾಗಿ ಪಿಂಚಣಿ ಇಲ್ಲದ ವೃದ್ಧರು ಸಂಪೂರ್ಣವಾಗಿ ಮಕ್ಕಳ ಮೇಲೆ ಅವಲಂಬಿತರಾಗುತ್ತಾರೆ.

ಆರ್ಥಿಕ ತಜ್ಞರ ದೃಷ್ಟಿಯಿಂದ ನೋಡಿದರೆ, ನಿವೃತ್ತಿಯ ಸುಧಾರಣೆಯು ಮಾರುಕಟ್ಟೆಯ ಆಗತ್ಯದಿಂದ ನಿರ್ಧಾರವಾಗಬಾರದು. ಬದಲಿಗೆ, ಕುಟುಂಬಗಳ ಬದುಕಿನ ಅನುಭವದಿಂದ ಆರಂಭವಾಗಬೇಕು. ಕಡಿಮೆ ವೆಚ್ಚದ, ಸಾಮೂಹಿಕ ವ್ಯವಸ್ಥೆಗಳಾದ ಇಪಿಎಫ್‌ಒ ಅನ್ನು ಇನ್ನೂ ಬಲಪಡಿಸುವುದು, ಆಡಳಿತವನ್ನು ಸುಧಾರಿಸುವುದು, ಕಾರ್ಯವ್ಯಾಪ್ತಿಯನ್ನು ಹಂತ ಹಂತವಾಗಿ ವಿಸ್ತರಿಸುವುದು, ವೃದ್ಧರಿಗೆ ಕನಿಷ್ಠ ಸಾರ್ವಜನಿಕ ಪಿಂಚಣಿ ನೀಡುವುದು. ಯಾಕೆಂದರೆ, ಈಗ ನೀಡುತ್ತಿರುವ ಪಿಂಚಣಿ ಮೊತ್ತ ಇಂದಿನ ಕಾಲದ ಜೀವನ ಖರ್ಚಿಗೆ ಸಾಕಾಗುವುದಿಲ್ಲ.

ಭಾರತದ ಮಧ್ಯಮ ವರ್ಗಕ್ಕೆ ನಿವೃತ್ತಿ ಭದ್ರತೆ ಎನ್ನುವುದು ಹೂಡಿಕೆಯಲ್ಲ. ಅದು ಕುಟುಂಬದ ಸ್ಥಿರತೆ, ವೃದ್ಧಾಪ್ಯದ ಗೌರವ ಮತ್ತು ನಿವೃತ್ತಿಯ ನೆಮ್ಮದಿಯ ದಿನಗಳಲ್ಲಿ ಸಂಕಷ್ಟವನ್ನು ದೂರಮಾಡುವ ಇಡಗಂಟು. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಪಿಂಚಿಣಿ ಯೋಜನೆಗಳು ಲಭ್ಯವಿವೆ. ಉದಾಹರಣೆಗೆ, ಭಾರತೀಯ ಜೀವ ವಿಮಾ ನಿಗಮದಂತಹ ಸಂಸ್ಥೆಗಳು ಈ ರೀತಿಯ ಸೇವೆಗಳನ್ನು ನೀಡುತ್ತಿರುವ ಬಗ್ಗೆ ತಿಳಿದುಕೊಳ್ಳಬೇಕು. ಇದಕ್ಕೆ ನಿವೃತ್ತಿಯ ದಿನಗಳ ಸುರಕ್ಷತೆಗೆ ಸರಿಯಾದ ಪಿಂಚಿಣಿ ಯೋಜನೆಗನ್ನು ಆರಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.