ADVERTISEMENT

ಷೇರುಗಳಲ್ಲಿ ಹಣ ಹೂಡಿಕೆಗೆ ಇದು ಸಕಾಲ: ಪರಿಣತರ ಸಲಹೆ

ಪಿಟಿಐ
Published 29 ಮಾರ್ಚ್ 2020, 19:45 IST
Last Updated 29 ಮಾರ್ಚ್ 2020, 19:45 IST
ಕರಡಿ ಪ್ರಭಾವ
ಕರಡಿ ಪ್ರಭಾವ   

ನವದೆಹಲಿ: ‘ಕೊರೊನಾ–2’ ವೈರಸ್‌ ಸೃಷ್ಟಿಸಿರುವ ಆತಂಕದ ಕಾರಣಕ್ಕೆ ಗಮನಾರ್ಹವಾಗಿ ಕುಸಿದಿರುವ ಷೇರುಪೇಟೆಯಲ್ಲಿ ದೀರ್ಘಾವಧಿ ಲಾಭದ ಉದ್ದೇಶದಿಂದ ಹಣ ತೊಡಗಿಸುವುದಕ್ಕೆ ಇದು ಸಕಾಲವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಆರೋಗ್ಯ ರಕ್ಷಣೆ ಮತ್ತು ದೂರಸಂಪರ್ಕ ಕ್ಷೇತ್ರದ ವಲಯದಲ್ಲಿ ಮಾಡುವ ಹೂಡಿಕೆಗೆ ಭವಿಷ್ಯದಲ್ಲಿ ಉತ್ತಮ ಲಾಭ ಪಡೆಯುವುದಕ್ಕೆ ಸದ್ಯದ ಪರಿಸ್ಥಿತಿಯು ಸೂಕ್ತವಾಗಿದೆ. ಹೂಡಿಕೆದಾರರು ಷೇರುಪೇಟೆ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಮತ್ತು ಮ್ಯೂಚುವಲ್‌ ಫಂಡ್‌ ತರಹದ ಇಂಡೆಕ್ಸ್‌ ಫಂಡ್ಸ್‌ಗಳಲ್ಲಿ ಹಣ ತೊಡಗಿಸುವುದು ಉತ್ತಮ ನಿರ್ಧಾರವಾಗಿರಲಿದೆ’ ಎಂದು ನಿಪ್ಪೊನ್‌ ಇಂಡಿಯಾ ಮ್ಯೂಚುವಲ್‌ ಫಂಡ್‌ನ ಸಿಇಒ ಸಂದೀಪ್‌ ಸಿಕ್ಕಾ ಹೇಳಿದ್ದಾರೆ.

‘ಹೊಸದಾಗಿ ಷೇರುಪೇಟೆಗೆ ಪ್ರವೇಶಿಸುವವರು ಮತ್ತು ಕಾಲ ಕಾಲಕ್ಕೆ ಹೂಡಿಕೆ ಮಾಡುವವರು ಇಂಡೆಕ್ಸ್‌ ಫಂಡ್ಸ್‌ಗಳಲ್ಲಿ ಹಣ ತೊಡಗಿಸುವುದು ವಿವೇಕಯುತ ಹೂಡಿಕೆ ನಿರ್ಧಾರವಾಗಿರಲಿದೆ’ ಎನ್ನುವುದು ಅವರ ಸಲಹೆಯಾಗಿದೆ.

ADVERTISEMENT

’ದೀರ್ಘಾವಧಿಯ ಪ್ರಯೋಜನಗಳನ್ನು ಗಮನದಲ್ಲಿ ಇಟ್ಟುಕೊಂಡು ಷೇರುಪೇಟೆಯಲ್ಲಿ ಹೂಡಿಕೆ ಮುಂದುವರೆಸಿ’ ಎಂದು ಯೆಸ್‌ ಎಎಂಸಿಯ ಸಿಇಒ ಕನ್ವರ್‌ ವಿವೇಕ್‌ ಸಲಹೆ ನೀಡಿದ್ದಾರೆ.

‘ಮಾರುಕಟ್ಟೆಯಲ್ಲಿ ಷೇರುಗಳ ಬೆಲೆ ಕುಸಿತವು (ಕರಡಿ ಹಿಡಿತ) ಹಣ ತೊಡಗಿಸುವುದಕ್ಕೆ ಅತ್ಯುತ್ತಮ ಸಮಯವಾಗಿರುತ್ತದೆ. ಪೇಟೆಯ ವಹಿವಾಟು ಗಮನಾರ್ಹವಾಗಿ ಕುಸಿದಿರುವಾಗ ಹಣ ತೊಡಗಿಸಿದರೆ ಮಧ್ಯಮಾವಧಿ ಮತ್ತು ದೀರ್ಘಾವಧಿಯಲ್ಲಿ ಉತ್ತಮ ಪ್ರತಿಫಲ ದೊರೆಯಲಿದೆ’ ಎಂದು ಆಶಿಕಾ ವೆಲ್ತ್‌ ಅಡ್ವೈಸರ್ಸ್‌ನ ಸಿಇಒ ಅಮಿತ್‌ ಜೈನ್‌ ಹೇಳುತ್ತಾರೆ.

‘ಹೊಸ ಹೂಡಿಕೆದಾರರು ಶೇ 40ರಷ್ಟನ್ನು ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಮತ್ತು ಶೇ 60ರಷ್ಟನ್ನು ಮಿಡ್‌ ಕ್ಯಾಪ್‌ ಸ್ಕೀಮ್‌ಗಳಲ್ಲಿ ತೊಡಗಿಸಬೇಕು’ ಎನ್ನುವುದು ಅವರ ಸಲಹೆಯಾಗಿದೆ.

‘ವ್ಯವಸ್ಥಿತ ಹೂಡಿಕೆ ಮೂಲಕ (ಎಸ್‌ಐಪಿ) ಹಣ ಹೂಡಿಕೆ ಮಾಡುವುದರಿಂದ ಹೂಡಿಕೆ ಮತ್ತು ಲಾಭದ ಮಧ್ಯೆ ಸಮತೋಲನ ಸಾಧಿಸಬಹುದು’ ಎಂಬುದು ಕ್ಯೂಬ್‌ ವೆಲ್ತ್‌ನ ಸಿಇಒ ಸತ್ಯೇನ್‌ ಕೊಠಾರಿ ಅವರ ಸಲಹೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.