ADVERTISEMENT

ನಗದು ಅವಲಂಬನೆ ಕಡಿಮೆ ಮಾಡಿದ ಯುಪಿಐ

₹2,000 ನೋಟು ಹಿಂಪಡೆಯುವಿಕೆ ಕುರಿತು ಎಸ್‌ಬಿಐ ವರದಿ

ವಿಜಯ ಜೋಷಿ
Published 23 ಮೇ 2023, 23:37 IST
Last Updated 23 ಮೇ 2023, 23:37 IST
   

ಬೆಂಗಳೂರು: ₹2,000 ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಚಲಾವಣೆಯಿಂದ ಹಿಂದಕ್ಕೆ ಪಡೆಯುತ್ತಿರುವುದು ‘ದೊಡ್ಡ ಸಂಗತಿ ಆಗುವ ಸಾಧ್ಯತೆ ಇಲ್ಲ’ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಅಂದಾಜಿಸಿದೆ.

ಹೀಗೆ ಹೇಳುತ್ತಿರಲು ಪ್ರಮುಖ ಕಾರಣಗಳನ್ನು ಎಸ್‌ಬಿಐ ಅರ್ಥಶಾಸ್ತ್ರಜ್ಞರು ನೀಡಿದ್ದಾರೆ. ಮೊದಲನೆಯದು, ಏಕೀಕೃತ ಪಾವತಿ ವ್ಯವಸ್ಥೆಯು (ಯುಪಿಐ) ತಂದಿರುವ ಬದಲಾವಣೆ. ಎರಡನೆಯದು, ₹2,000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಆರ್‌ಬಿಐ ನಿಧಾನವಾಗಿ ತಗ್ಗಿಸಿರುವುದು.

ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಮೂಲಕ ಆಗುವ ಪಾವತಿಗಳ ಮೌಲ್ಯ ಹಾಗೂ ಸಂಖ್ಯೆಯಲ್ಲಿ ಗ್ರಾಮೀಣ ಮತ್ತು ಅರೆಪಟ್ಟಣ ಪ್ರದೇಶಗಳ ಪಾಲು ಶೇ 60ರಷ್ಟಿದೆ. ನಗರಗಳಲ್ಲಿ ಮಾತ್ರ ಡಿಜಿಟಲ್ ಪಾವತಿಗಳು ಹೆಚ್ಚಿವೆ ಎಂಬ ನಂಬಿಕೆ ತಪ್ಪು. ಗ್ರಾಮೀಣ ಮತ್ತು ಅರೆಪಟ್ಟಣಗಳಿಗೆ ಸೇರಿದವರೂ ಡಿಜಿಟಲ್ ಪಾವತಿಗಳನ್ನು ಹೆಚ್ಚು ಬಳಸುತ್ತಿದ್ದಾರೆ, ನಗದು ವಹಿವಾಟಿನ ಮೇಲೆ ಕಡಿಮೆ ಅವಲಂಬಿತರಾಗಿದ್ದಾರೆ ಎಂಬುದನ್ನು ಇದು ಸೂಚಿಸುತ್ತಿದೆ ಎಂದು ಎಸ್‌ಬಿಐ ಹೇಳಿದೆ.

ADVERTISEMENT

ಕಳೆದ ವರ್ಷ ನಡೆಸಿದ ಅಧ್ಯಯನದ ಪ್ರಕಾರ 2018ರ ನವೆಂಬರ್‌ ನಂತರದಲ್ಲಿ ಎಟಿಎಂಗಳಿಂದ ನಗದು ಹಿಂಪಡೆಯುವುದು ಕಡಿಮೆ ಆಗಿದೆ. ಅಲ್ಲದೆ, ಯುಪಿಐ ಮೂಲಕ ಮಾಡುವ ಪಾವತಿಯಲ್ಲಿ ₹100ರಷ್ಟು ಹೆಚ್ಚಳವಾದರೆ, ಡೆಬಿಟ್ ಕಾರ್ಡ್ ವಹಿವಾಟಿನಲ್ಲಿ ₹18ರಷ್ಟು ಕಡಿಮೆ ಆಗುತ್ತದೆ. ಪ್ರತಿ ವ್ಯಕ್ತಿ ವರ್ಷಕ್ಕೆ ಸರಾಸರಿ 8 ಬಾರಿ ಮಾತ್ರ ಎಟಿಎಂಗೆ ಭೇಟಿ ನೀಡುತ್ತಿದ್ದಾನೆ. ಈ ಮೊದಲು ವ್ಯಕ್ತಿಯೊಬ್ಬ ಎಟಿಎಂಗೆ ವರ್ಷಕ್ಕೆ ಸರಾಸರಿ 16 ಬಾರಿ ಭೇಟಿ ನೀಡುತ್ತಿದ್ದ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಡಿಜಿಟಲ್ ಪಾವತಿಗಳಲ್ಲಿ ದೇಶವು ಹೊಸ ಮೈಲಿಗಲ್ಲುಗಳನ್ನು ದಾಟಿದೆ. ಒಟ್ಟು ಜಿಡಿಪಿಯಲ್ಲಿ ಡಿಜಿಟಲ್ ಪಾವತಿಗಳ ಪ್ರಮಾಣ ಹೆಚ್ಚಾಗುತ್ತಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ವ್ಯಕ್ತಿಯಿಂದ ವ್ಯಾಪಾರಿಗೆ ಮಾಡುವ ಪಾವತಿಗಳಲ್ಲಿ ಯುಪಿಐ ಅತ್ಯಂತ ಜನಪ್ರಿಯವಾಗಿದೆ. ಒಟ್ಟು ಡಿಜಿಟಲ್ ಪಾವತಿಗಳಲ್ಲಿ ಶೇ 73ರಷ್ಟು ಯುಪಿಐ ಮೂಲಕ ಆಗುತ್ತಿವೆ. 2016–17ರಲ್ಲಿ ಯುಪಿಐ ಬಳಸಿ 1.8 ಕೋಟಿ ಪಾವತಿಗಳು ಆಗಿದ್ದವು. 2022–23ರಲ್ಲಿ ಅದು 8,375 ಕೋಟಿಗೆ ಏರಿಕೆ ಆಗಿದೆ’ ಎಂದು ಎಸ್‌ಬಿಐ ವಿವರಿಸಿದೆ.

2016–17ರಲ್ಲಿ ಯುಪಿಐ ಮೂಲಕ ₹6,947 ಕೋಟಿ ಮೊತ್ತ ಪಾವತಿಸಲಾಗಿತ್ತು. 2022–23ರಲ್ಲಿ ಇದು ₹139 ಲಕ್ಷ ಕೋಟಿಗೆ ಹೆಚ್ಚಾಗಿದೆ. ಆದರೆ, 2022–23ರಲ್ಲಿ ಚಲಾವಣೆಯಲ್ಲಿನ ನಗದಿನ ಪ್ರಮಾಣವು ಜಿಡಿಪಿಯ ಶೇ 12.4ರಷ್ಟು ಮಾತ್ರ ಇದೆ. ಇದು 2015–16ರಲ್ಲಿಯೂ ಇಷ್ಟೇ ಇತ್ತು. ಚಲಾವಣೆಯಲ್ಲಿ ಇರುವ ನಗದಿನ ಹೆಚ್ಚಳದ ಪ್ರಮಾಣವು ತಗ್ಗಿದೆ ಎಂದು ಎಸ್‌ಬಿಐ ಹೇಳಿದೆ.

₹2,000 ಮುಖಬೆಲೆಯು ನೋಟು ಅರ್ಥವ್ಯವಸ್ಥೆಯಲ್ಲಿ ಹೊಂದಿರುವ ಪಾಲು ನಿಧಾನವಾಗಿ ಕಡಿಮೆಯಾಗುವಂತೆ ಆರ್‌ಬಿಐ ನೋಡಿಕೊಂಡಿದೆ. ಇದು ಈ ನೋಟನ್ನು ಚಲಾವಣೆಯಿಂದ ಸಂಪೂರ್ಣವಾಗಿ ಹೊರತೆಗೆಯುವುದಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಎಸ್‌ಬಿಐ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.