ADVERTISEMENT

ಸುಸ್ತಿ ಸಾಲ ವಸೂಲಿಗೆ 6 ತಿಂಗಳ ತಡೆ: ತಿದ್ದುಪಡಿ ಮಸೂದೆಗೆ ಸಂಸತ್‌ನಲ್ಲಿ ಒಪ್ಪಿಗೆ

ಐಬಿಸಿ ತಿದ್ದುಪಡಿಗೆ ರಾಜ್ಯಸಭೆ ಒಪ್ಪಿಗೆ

ಪಿಟಿಐ
Published 19 ಸೆಪ್ಟೆಂಬರ್ 2020, 14:44 IST
Last Updated 19 ಸೆಪ್ಟೆಂಬರ್ 2020, 14:44 IST
   

ನವದೆಹಲಿ: ಸುಸ್ತಿದಾರ ಕಂಪನಿಗಳಿಂದ ಸಾಲ ವಸೂಲಿಗೆ ಜಾರಿಯಲ್ಲಿ ಇರುವ ದಿವಾಳಿ ಸಂಹಿತೆ (ಐಬಿಸಿ) ಪ್ರಕ್ರಿಯೆಯನ್ನು ಆರು ತಿಂಗಳವರೆಗೆ ಮುಂದೂಡುವ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಶನಿವಾರ ಒಪ್ಪಿಗೆ ನೀಡಿದೆ. ಆರು ತಿಂಗಳ ಗಡುವು ಮಾರ್ಚ್‌ 25ರಿಂದ ಆರಂಭವಾಗಿದ್ದು, ಇದೇ ತಿಂಗಳ 25ಕ್ಕೆ ಕೊನೆಗೊಳ್ಳಲಿದೆ.

‘ತಿದ್ದುಪಡಿ ಅನ್ವಯ ಒಂದು ವರ್ಷ ಅವಧಿಗೆ ಮಾತ್ರವೇ ಮುಂದೂಡಿಕೆಗೆ ಅವಕಾಶ ಇದೆ. ಆದರೆ, ಆರು ತಿಂಗಳ ಅವಧಿ ಸೆ. 25ಕ್ಕೆ ಮುಕ್ತಾಯವಾಗಲಿದೆ. ಹಾಗಾಗಿ ಸೆಪ್ಟೆಂಬರ್‌ 24ರಂದು ಮುಂದಿನ ನಿರ್ಧಾರವನ್ನು ಘೋಷಿಸಬೇಕು. ಒಂದು ವೇಳೆ ಅವದಿ ವಿಸ್ತರಿಸಿದರೂ ಸಹ ಮುಂದಿನ ಮಾರ್ಚ್‌ 25ಕ್ಕೆ ಇದು ಅಂತ್ಯವಾಗಲಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

‘ಲಾಕ್‌ಡೌನ್‌ ಜಾರಿಯಾದ ಅಂದರೆ ಮಾರ್ಚ್‌ 25ರ ಬಳಿಕ ಸಾಲ ಬಾಕಿ ಉಳಿಸಿಕೊಂಡಿದ್ದವರ ವಿರುದ್ಧ ಆರು ತಿಂಗಳವರೆಗೆ ದಿವಾಳಿ ಪ್ರಕ್ರಿಯೆ ಜಾರಿಯಾಗುವುದಿಲ್ಲ. ಆದರೆ ಮಾರ್ಚ್‌ 25ಕ್ಕೂ ಮುಂಚಿನ ಸಾಲ ಬಾಕಿಗೆ ದಿವಾಳಿ ಪ್ರಕ್ರಿಯೆ ಅನ್ವಯವಾಗಲಿದೆ’ ಎಂದು ನಿರ್ಮಲಾ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಕೊರೊನಾ ವೈರಾಣು ಪಿಡುಗಿನಿಂದ ತೀವ್ರ ಹಣಕಾಸು ಸಂಕಷ್ಟಕ್ಕೆ ಸಿಲುಕಿರುವ ಕಾರ್ಪೊರೇಟ್‌ ವಲಯದ ಸಾಲಗಾರರಿಗೆ ಇದರಿಂದ ನೆಮ್ಮದಿ ದೊರೆಯಲಿದೆ. ಸಾಲ ಮರುಪಾವತಿ ಮಾಡದ ಸುಸ್ತಿದಾರರಿಂದ ಸಾಲ ವಸೂಲಾತಿಗೆ ಅವಕಾಶ ಮಾಡಿಕೊಟ್ಟಿದ್ದ ‘ಐಬಿಸಿ’ ಪ್ರಕ್ರಿಯೆಗೆ ಈಗ ಆರು ತಿಂಗಳವರೆಗೆ ತಡೆ ಬೀಳಲಿದೆ.

ಬಹುತೇಕ ಪ್ರತಿಪಕ್ಷಗಳು ಮಸೂದೆಗೆ ಬೆಂಬಲ ವ್ಯಕ್ತಪಡಿಸಿದರು. ಹಾಗೆಯೇ ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರು ಮತ್ತು ಬಡ ಜನರ ಸಾಲದ ಮೇಲಿನ ಬಡ್ಡಿದರವನ್ನೂ ಮನ್ನಾ ಮಾಡುವಂತೆ ಮನವಿ ಮಾಡಿದರು.

ಮಸೂದೆ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಆರ್ಥಿಕತೆಯ ಚೇತರಿಕೆಗೆ ಅದು ನೆರವಾಗಲಿದೆ ಎನ್ನುವ ಭರವಸೆಯನ್ನು ಹಲವು ಸದಸ್ಯರು ವ್ಯಕ್ತಿಪಡಿಸಿದರಾದರೂ ದುರುಪಯೋಗ ಆಗುವ ಸಾಧ್ಯತೆ ಇದೆ ಎಂದೂ ಆತಂಕ ವ್ಯಕ್ತಪಡಿಸಿದರು.

‘ಕಾರ್ಪೊರೇಟ್‌ ಸಾಲದಾರ ಮತ್ತು ವೈಯಕ್ತಿಕ ಖಾತರಿದಾರರನ್ನು ಏಕಕಾಲಕ್ಕೆ ದಿವಾಳಿ ಪ್ರಕ್ರಿಯೆಗೆ ಒಳಪಡಿಸಲು ಇದು ಅವಕಾಶ ಕಲ್ಪಿಸಲಿದೆ’ ಎಂದು ಸದಸ್ಯರೊಬ್ಬರ ಪ್ರಶ್ನೆಗೆ ನಿರ್ಮಲಾ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.