ADVERTISEMENT

ರೂಪಾಯಿ ಬೆಲೆ ದಾಖಲೆ ಇಳಿಕೆ

ಗಗನಮುಖಿಯಾದ ಡಾಲರ್‌: ಭಾರತಕ್ಕೆ ತೈಲ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 19:25 IST
Last Updated 31 ಆಗಸ್ಟ್ 2018, 19:25 IST
   

ನವದೆಹಲಿ:ಡಾಲರ್‌ ಎದುರು ರೂಪಾಯಿಯ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಒಂದು ಡಾಲರ್‌ ಬೆಲೆ 71 ರೂಪಾಯಿಯವರೆಗೆ ಏರಿಕೆಯಾಗಿದೆ. ರೂಪಾಯಿಯ ಇತಿಹಾಸದಲ್ಲಿಯೇ ಈ ಮಟ್ಟಕ್ಕೆ ಕುಸಿದಿರುವುದು ಇದೇ ಮೊದಲು.

ಈ ಕುಸಿತದಿಂದಾಗಿ ಕಚ್ಚಾ ತೈಲ ಖರೀದಿಗೆ ದೇಶವು ಮಾಡಬೇಕಾಗಿರುವ ವೆಚ್ಚದಲ್ಲಿ ಏರಿಕೆಯಾಗಬಹುದು. ಇದರಿಂದಾಗಿ ತೈಲ ಉದ್ಯಮದ ಡಾಲರ್‌ ಬೇಡಿಕೆಯೂ ತೀವ್ರವಾಗಿ ಏರಿಕೆಯಾಗಲಿದೆ. ಪರಿಣಾಮವಾಗಿ ಡಾಲರ್‌ ಮೌಲ್ಯ ಇನ್ನಷ್ಟು ಏರಿಕೆಯಾಗುವ ಕಳವಳ ಉಂಟಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಿಂದಾಗಿ ದೇಶದಲ್ಲಿ ಹಣದುಬ್ಬರ ಹೆಚ್ಚಬಹುದು ಎಂಬ ಆತಂಕ ಸೃಷ್ಟಿಯಾಗಿದೆ.

ರೂಪಾಯಿ ಮೌಲ್ಯ ಕುಸಿತಕ್ಕೆ ದೇಶದ ಆರ್ಥಿಕತೆಯ ಅಂಶಗಳು ಕಾರಣ ಅಲ್ಲ. ಟರ್ಕಿ ಮತ್ತು ಅರ್ಜೆಂಟೀನಾದ ಕರೆನ್ಸಿಗಳಾದ ಲಿರಾ ಮತ್ತು ಪೆಸೊ ಮೌಲ್ಯ ಕಳೆದುಕೊಂಡಿರುವುದರಿಂದ ಡಾಲರ್‌ ಬೆಲೆ ಏರಿಕೆಯಾಗಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಲಿರಾ ಮೌಲ್ಯವು ಗುರುವಾರ ಕೂಡ ಶೇ 5ರಷ್ಟು ಕುಸಿತ ಕಂಡಿದೆ.

ADVERTISEMENT

ಏಷ್ಯಾದ ಎಲ್ಲ ದೇಶಗಳ ಕರೆನ್ಸಿ ಕೂಡ ರೂಪಾಯಿಯ ರೀತಿಯಲ್ಲಿಯೇ ಕುಸಿತ ಕಂಡಿದೆ. ಹಾಗಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ (ಆರ್‌ಬಿಐ)ಮಧ್ಯಪ್ರವೇಶದ ಸಾಧ್ಯತೆ ಇಲ್ಲ. ಕುಸಿತ ಹೀಗೆಯೇ ಮುಂದುವರಿದರೆರೂಪಾಯಿಯ ರಕ್ಷಣೆಗೆ ಆರ್‌ಬಿಐ ಬರಲೇಬೇಕಾಗುತ್ತದೆ. ಆದರೆ ದೊಡ್ಡ ಮಟ್ಟದ ರಕ್ಷಣಾ ಕ್ರಮಗಳ ನಿರೀಕ್ಷೆ ಇಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ವರ್ಷ ರೂಪಾಯಿಯ ಮೌಲ್ಯ ಡಾಲರ್‌ ಎದುರು ಶೇ 11ರಷ್ಟು ಕುಸಿದಿದೆ. ರೂಪಾಯಿಯ ಬೆಲೆ ಸ್ಥಿರತೆ ಕಂಡುಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಸರ್ಕಾರ ಇದೆ. ಆಗಸ್ಟ್‌ ತಿಂಗಳೊಂದರಲ್ಲಿಯೇ ರೂಪಾಯಿಯ ಕುಸಿತ ಪ್ರಮಾಣ ಶೇ 3.6ರಷ್ಟು ಇತ್ತು.

ರೂಪಾಯಿ ಬೆಲೆ ಕುಸಿತ ಮತ್ತು ಕಚ್ಚಾ ತೈಲ ದರ ಏರಿಕೆ ತಾತ್ಕಾಲಿಕ ವಿದ್ಯಮಾನವಾಗಿದೆ. ದೇಶದೊಳಕ್ಕೆ ಬಂಡವಾಳ ಹರಿವು ಸಮೃದ್ಧವಾಗಿದೆ. ವಿದೇಶಿ ನೇರ ಹೂಡಿಕೆಯಲ್ಲಿ ಶೇ 13–14ರಷ್ಟು ಏರಿಕೆಯಾಗಿದೆ. ಹಾಗಾಗಿ ಚಿಂತೆಗೆ ಕಾರಣವಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ಚಂದ್ರ ಗರ್ಗ್‌ ಹೇಳಿದ್ದಾರೆ.

ಉದ್ಯಮದ ವಿಶ್ಲೇಷಕರ ಪ್ರಕಾರ, ಜಾಗತಿಕ ವ್ಯಾಪಾರ ಸಮರ ದೊಡ್ಡ ತಲೆನೋವಾಗಿದೆ. ಇದು ಸೆಪ್ಟೆಂಬರ್‌ ತಿಂಗಳಿನಲ್ಲಿಯೂ ರೂಪಾಯಿಯನ್ನು ಕಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.