ಮುಂಬೈ: ಸತತ ಎರಡನೇ ದಿನವಾದ ಬುಧವಾರ ಕೂಡ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಚೇತರಿಕೆಯ ಹಳಿಗೆ ಮರಳಿದೆ.
ರೂಪಾಯಿ ಮೌಲ್ಯ 13 ಪೈಸೆ ಏರಿಕೆಯಾಗಿದೆ. ಪ್ರತೀ ಡಾಲರ್ ಮೌಲ್ಯ ₹86.40 ಆಗಿದೆ.
ದೇಶೀಯ ಷೇರುಪೇಟೆಯು ಏರಿಕೆ ದಾಖಲಿಸಿದೆ. ಅಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಇಳಿಕೆಯಾಗುತ್ತಿದೆ. ಇದು ವಿನಿಮಯ ಮಾರುಕಟ್ಟೆಯಲ್ಲಿ ಒತ್ತಡಕ್ಕೆ ಸಿಲುಕಿದ್ದ ರೂಪಾಯಿ ಮೌಲ್ಯವು ಚೇತರಿಸಿಕೊಳ್ಳಲು ನೆರವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದ್ದ ಡಾಲರ್ ಸೂಚ್ಯಂಕ ಕೂಡ ಇಳಿದಿದೆ. ಇದು ಕೂಡ ರೂಪಾಯಿ ಮೌಲ್ಯ ಹೆಚ್ಚಳಕ್ಕೆ ಕಾರಣವಾಗಿದೆ. ಆದರೆ, ದೇಶೀಯ ಷೇರುಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹಿಂಪಡೆಯುವುದು ಮುಂದುವರಿದಿದೆ ಎಂದು ಹೇಳಿದ್ದಾರೆ.
ಆರಂಭಿಕ ವಹಿವಾಟಿನಲ್ಲಿ ₹86.50 ಇದ್ದ ರೂಪಾಯಿ ಮೌಲ್ಯವು, ಇಂಟ್ರಾಡೇನಲ್ಲಿ ₹86.55ಕ್ಕೆ ತಲುಪಿತ್ತು. ವಹಿವಾಟಿನ ಒಂದು ಸಂದರ್ಭದಲ್ಲಿ ₹86.28ಕ್ಕೆ ಮುಟ್ಟಿತ್ತು.
ಮಂಗಳವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 17 ಪೈಸೆ ಹೆಚ್ಚಳವಾಗಿತ್ತು.
‘ಸದ್ಯ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಇಳಿಕೆ ಕಂಡಿದ್ದರಿಂದ ರೂಪಾಯಿ ಮೌಲ್ಯವು ಚೇತರಿಸಿಕೊಂಡಿದೆ. ಅಮೆರಿಕದಲ್ಲಿ ಜನವರಿ ತಿಂಗಳಿನಲ್ಲಿ ಹಣದುಬ್ಬರ ಏರಿಕೆಯಾಗುವ ನಿರೀಕ್ಷೆಯಿದೆ. ಇದು ಡಾಲರ್ ಬಲಗೊಳ್ಳಲು ಸಹಕಾರಿಯಾಗಲಿದೆ. ಆಗ ಮತ್ತೆ ರೂಪಾಯಿಯು ಒತ್ತಡಕ್ಕೆ ಸಿಲುಕುವ ಸಾಧ್ಯತೆಯಿದೆ’ ಎಂದು ಮಿರೇ ಅಸೆಟ್ ಶೇರ್ಖಾನ್ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಅನುಜ್ ಚೌಧರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.