ಮುಂಬೈ: ವಿದೇಶಿ ಬಂಡವಾಳದ ಹೊರ ಹರಿವು ಮತ್ತು ಡಾಲರ್ ಸೂಚ್ಯಂಕ ಏರಿಕೆಯಿಂದಾಗಿ ಡಾಲರ್ ಎದುರು ರೂಪಾಯಿಯು ಮಂಗಳವಾರ 8 ಪೈಸೆ ಕುಸಿತ ದಾಖಲಿಸಿದೆ. ಇದರಿಂದ ಪ್ರತಿ ಡಾಲರ್‌ಗೆ ರೂಪಾಯಿ ಮೌಲ್ಯವು ₹86.96ಕ್ಕೆ ಕೊನೆಗೊಂಡಿದೆ.
ವಿದೇಶಿ ಹೂಡಿಕೆದಾರರು ದೇಶೀಯ ಮಾರುಕಟ್ಟೆಯಲ್ಲಿನ ತಮ್ಮ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಜತೆಗೆ ಆರ್‌ಬಿಐನಿಂದಲೂ ನಿರೀಕ್ಷಿತ ಬೆಂಬಲ ಸಿಗದ ಕಾರಣ ಡಾಲರ್ ಮತ್ತು ರೂಪಾಯಿ ನಡುವಿನ ಸಂಬಂಧ ಅಷ್ಟಾಗಿ ಉತ್ತಮವಾಗಿಲ್ಲ.
ಮಂಗಳವಾರ ಬೆಳಿಗ್ಗೆ ಪ್ರತಿ ಡಾಲರ್ ಎದುರು ರೂಪಾಯಿ ಮೌಲ್ಯ ₹86.94 ಇತ್ತು. ಒಂದು ಹಂತದಲ್ಲಿ ₹86.91ಕ್ಕೆ ಹೆಚ್ಚಳ ಕಂಡಿತು. ಮತ್ತೊಮ್ಮೆ ₹86.98ಕ್ಕೂ ಕುಸಿಯಿತು. ಅಂತಿಮವಾಗಿ ದಿನದ ಅಂತ್ಯಕ್ಕೆ ₹86.96ಕ್ಕೆ ಸ್ಥಿರವಾಯಿತು. ಹಿಂದಿನ ದಿನದ ವಹಿವಾಟಿಗೆ ಹೋಲಿಸಿದಲ್ಲಿ 8 ಪೈಸೆ ಕುಸಿತ ದಾಖಲಿಸಿದಂತಾಗಿದೆ.
ಸೋಮವಾರದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 17 ಪೈಸೆ ಕುಸಿದಿತ್ತು. ದೇಶೀಯ ಮಾರುಕಟ್ಟೆಯ ನಿರಾಶಾದಾಯಕ ವಹಿವಾಟು ರೂಪಾಯಿ ಮೇಲಿನ ಒತ್ತಡವನ್ನು ಹೆಚ್ಚಿಸಿದೆ ಎಂದು ಮಾರುಕಟ್ಟೆ ಪಂಡಿತರು ಬೇಸರ ವ್ಯಕ್ತಪಡಿಸಿದ್ದಾರೆ.
ಜನವರಿಯಿಂದ ಇಲ್ಲಿಯವರೆಗೆ ರೂಪಾಯಿ ಮೌಲ್ಯವು ಶೇ 2.38ರಷ್ಟು ಕುಸಿತ ದಾಖಲಿಸಿದೆ. ಇದರಿಂದಾಗಿ ರಫ್ತು ಪ್ರಮಾಣವು ವಾರ್ಷಿಕ 36.43 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಹಾಗೂ ಮಾಸಿಕ 22.99 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಕೊರತೆ ಎದುರಿಸಿದೆ. ಆಮದು ಪ್ರಮಾಣವು ಶೇ 10.28ರಷ್ಟು ಹೆಚ್ಚಳವಾಗಿದೆ. ಚಿನ್ನದ ಆಮದು ಹೆಚ್ಚಾಗಿರುವುದರಿಂದ ವಹಿವಾಟು 59.42 ಶತಕೊಟಿ ಅಮೆರಿಕನ್ ಡಾಲರ್‌ನಷ್ಟು ಏರಿಕೆಯಾಗಿದೆ ಎಂದು ವಾಣಿಜ್ಯ ಮಂತ್ರಾಲಯದ ಮಾಹಿತಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.