ಡಾಲರ್ ವಿರುದ್ಧ ಮತ್ತೆ ಕುಸಿದ ರೂಪಾಯಿ ಮೌಲ್ಯ
ಮುಂಬೈ: ಅಮೆರಿಕದ ಡಾಲರ್ ಎದುರು 14 ಪೈಸೆಯಷ್ಟು ದಾಖಲೆಯ ಕುಸಿತವನ್ನು ರೂಪಾಯಿ ಗುರುವಾರ ದಾಖಲಿಸಿದೆ. ಪ್ರತಿ ಡಾಲರ್‌ಗೆ ರೂಪಾಯಿ ಮೌಲ್ಯ ₹87.57ರಷ್ಟು ದಾಖಲಾಗಿದೆ.
ರೂಪಾಯಿ ಮೇಲಿನ ಒತ್ತಡ ನಿವಾರಣೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಭೆಯು ಶುಕ್ರವಾರ ನಡೆಯಲಿದ್ದು, ದರ ಕಡಿತ ಹೆಚ್ಚಳ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
‘ದೇಶೀಯ ಮಾರುಕಟ್ಟೆ ದುರ್ಬಲಗೊಂಡಿದೆ ಹಾಗೂ ಆಮದುದಾರರು ಡಾಲರ್‌ಗೆ ಹೆಚ್ಚಿನ ಬೇಡಿಕೆ ಇಟ್ಟ ಪರಿಣಾಮವಾಗಿ ರೂಪಾಯಿ ದಾಖಲೆಯ ಕುಸಿತ ಕಂಡಿದೆ. ಅಮೆರಿಕದ ಸುಂಕ ಕುರಿತು ಜಾಗತಿಕ ಮಟ್ಟದಲ್ಲಿ ಈಗಲೂ ನಿಶ್ಚಿತತೆ ಮುಂದುವರಿದಿರುವ ಕಾರಣ ರೂಪಾಯಿ ಮೌಲ್ಯ ಇನ್ನಷ್ಟು ಕುಸಿಯುವ ಅಪಾಯವಿದೆ’ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ದಿನದ ಆರಂಭಕ್ಕೆ ರೂಪಾಯಿ ಮೌಲ್ಯವು ಪ್ರತಿ ಡಾಲರ್‌ಗೆ ₹87.54ರಷ್ಟಿತ್ತು. ನಂತರ ₹87.60ಕ್ಕೆ ಕುಸಿಯಿತು. ಅಂತಿಮವಾಗಿ ₹87.57ಕ್ಕೆ ಕೊನೆಗೊಂಡಿತು. ಡಾಲರ್ ಎದುರು ರೂಪಾಯಿ ಮೌಲ್ಯವು ಬುಧವಾರ 36 ಪೈಸೆಯಷ್ಟು ಕುಸಿದಿತ್ತು. ಇದರಿಂದ ಈ ವರ್ಷ ಈವರೆಗೂ ರೂಪಾಯಿ ಮೌಲ್ಯವು ಶೇ 2ರಷ್ಟು ಕುಸಿದಿದೆ. 2024ರಲ್ಲಿ ಡಾಲರ್ ಎದುರು ರೂಪಾಯಿ ಶೇ 3ರಷ್ಟು ಕುಸಿದಿತ್ತು. ಏಷ್ಯಾದ ಕರೆನ್ಸಿಗಳಲ್ಲೇ ಭಾರತದ ರೂಪಾಯಿ ಅತ್ಯಂತ ಹೆಚ್ಚು ಕುಸಿತ ಕಂಡಿದೆ.
ಗ್ರೀನ್‌ಬ್ಯಾಕ್ ಎದುರು 2024ರ ಜ. 1ರಂದು ರೂಪಾಯಿ ಮೌಲ್ಯ ₹83.21ರಷ್ಟಿತ್ತು. ಈ ವರ್ಷ ರೂಪಾಯಿಯು 193 ಪೈಸೆ ಕಳೆದುಕೊಂಡಿದೆ. 2025ರ ಜ.1 ರಂದು ಡಾಲರ್ ಎದುರು ರೂಪಾಯಿ ಮೌಲ್ಯ ₹85.64ರಷ್ಟಿತ್ತು. ಚೀನಾ ಮತ್ತು ಅಮೆರಿಕ ಹೇರಿರುವ ಹೆಚ್ಚುವರಿ ಸುಂಕದಿಂದ ಉಂಟಾಗಿರುವ ಜಾಗತಿಕ ವ್ಯಾಪಾರ ಕದನದಲ್ಲಿ ರೂಪಾಯಿ ನಕಾರಾತ್ಮಕ ಬೆಳವಣಿಗೆ ದಾಖಲಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಬಿಎಸ್‌ಇ–ಸೆನ್ಸೆಕ್ಸ್‌ನ 30 ಷೇರುಗಳು 213.12 ಅಂಶಕಗಳಷ್ಟು ಮಾರಾಟವಾಗಿದೆ. ಇದು ಕಡಿಮೆ 78,058.16 ಅಂಶಗಳಷ್ಟು ಕನಿಷ್ಠ ದಾಖಲಾಗಿದೆ. ನಿಫ್ಟಿ 92.95ರಷ್ಟು ಅಂಶಗಳ ಕುಸಿತ ದಾಖಲಿಸಿ, 23,603.35ರಷ್ಟಕ್ಕೆ ನಿಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.