ನವದೆಹಲಿ: ಒಡಿಶಾದ ಗ್ರಾಮೀಣ ಪ್ರದೇಶ ಹಾಗೂ ಪಂಜಾಬ್‌ನ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಮಾಸಿಕ ಗೃಹಬಳಕೆ ವೆಚ್ಚದ (ಎಂಪಿಸಿಇ) ಪ್ರಮಾಣದಲ್ಲಿ ಗರಿಷ್ಠ ಏರಿಕೆಯಾಗಿದೆ ಎಂದು ಕುಟುಂಬ ಗೃಹಬಳಕೆ ವೆಚ್ಚ ಸಮೀಕ್ಷೆ ಹೇಳಿದೆ.
2023ರ ಆಗಸ್ಟ್‌ನಿಂದ 2024ರ ಜುಲೈವರೆಗೆ ಈ ಸಮೀಕ್ಷೆ ನಡೆಸಲಾಗಿದೆ. 2023–24ರಲ್ಲಿ ದೇಶದ ಪ್ರಮುಖ 18 ರಾಜ್ಯಗಳಲ್ಲಿ ಗೃಹಬಳಕೆಯ ಸರಾಸರಿ ವೆಚ್ಚದಲ್ಲಿ ಹೆಚ್ಚಳವಾಗಿದೆ.
ಒಡಿಶಾದ ಗ್ರಾಮೀಣ ಪ್ರದೇಶದಲ್ಲಿ ಶೇ 14ರಷ್ಟು ಹಾಗೂ ಪಂಜಾಬ್‌ನ ನಗರ ಪ್ರದೇಶಗಳಲ್ಲಿ ಶೇ 13ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಗುರುವಾರ ತಿಳಿಸಿದೆ.
ಮಹಾರಾಷ್ಟ್ರದ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸರಾಸರಿ ಶೇ 3ರಷ್ಟು ಹಾಗೂ ಕರ್ನಾಟಕದಲ್ಲಿ ಶೇ 5ರಷ್ಟು ಏರಿಕೆಯಾಗಿದೆ ಎಂದು ಹೇಳಿದೆ.
18 ರಾಜ್ಯಗಳ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಗೃಹಬಳಕೆ ವೆಚ್ಚದಲ್ಲಿ ಅಗಾಧ ವ್ಯತ್ಯಾಸವಿದೆ. 2022–23ನೇ ಸಾಲಿಗೆ ಹೋಲಿಸಿದರೆ 2023–24ರಲ್ಲಿ 11 ರಾಜ್ಯಗಳ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಗೃಹಬಳಕೆಯ ಅಂತರ ಕಡಿಮೆಯಾಗಿದೆ ಎಂದು ವಿವರಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳು (ಶೇ 8.44ರಷ್ಟು), ತರಕಾರಿ (ಶೇ 6.03) ವೆಚ್ಚಕ್ಕೆ ಹೋಲಿಸಿದರೆ ಪಾನೀಯ, ಉಪಹಾರ, ಸಂಸ್ಕರಿತ ಆಹಾರದ (ಶೇ 9.84) ಬಳಕೆಗೆ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ಧಾನ್ಯಗಳಿಗೆ ಮಾಡುವ ವೆಚ್ಚವು ಶೇ 4.99ರಷ್ಟಿದೆ ಎಂದು ತಿಳಿಸಿದೆ.
ಆಹಾರೇತರ ವಿಭಾಗದಲ್ಲಿ ಸಾಗಣೆ (ಶೇ 7.59), ವೈದ್ಯಕೀಯ (ಶೇ 6.83), ಬಟ್ಟೆ, ಹಾಸಿಗೆ ಮತ್ತು ಪಾದರಕ್ಷೆ (ಶೇ 6.63) ಹಾಗೂ ದೀರ್ಘಕಾಲಿಕ ಬಾಳಿಕೆ ಬರುವ ವಸ್ತುಗಳ ಮೇಲಿನ ವೆಚ್ಚವು (ಶೇ 6.48ರಷ್ಟು) ಹೆಚ್ಚಿದೆ ಎಂದು ವಿವರಿಸಿದೆ.
ನಗರ ಪ್ರದೇಶಗಳಲ್ಲಿ ಉಪಹಾರ ಮತ್ತು ಸಂಸ್ಕರಿತ ಆಹಾರ (ಶೇ 11.09), ಹಾಲು ಮತ್ತು ಹಾಲಿನ ಉತ್ಪನ್ನ (ಶೇ 7.19) ಮತ್ತು ತರಕಾರಿಗಳ ಖರೀದಿಗೆ ಮಾಡುವ ವೆಚ್ಚವು (ಶೇ 4.12) ಹೆಚ್ಚಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.