ADVERTISEMENT

ಭಾರತಕ್ಕೆ ಕಚ್ಚಾ ತೈಲ ಪೂರೈಸುವ ದೇಶಗಳ ಸಾಲಿನಲ್ಲಿ ರಷ್ಯಾಕ್ಕೆ ಎರಡನೇ ಸ್ಥಾನ

ಇರಾಕ್‌ನಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ

ಪಿಟಿಐ
Published 13 ಜೂನ್ 2022, 15:58 IST
Last Updated 13 ಜೂನ್ 2022, 15:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡುವ ದೇಶಗಳ ಸಾಲಿನಲ್ಲಿ ಮೇ ತಿಂಗಳಲ್ಲಿ ರಷ್ಯಾ ಎರಡನೇ ಸ್ಥಾನಕ್ಕೆ ಏರಿದೆ, ಸೌದಿ ಅರೇಬಿಯಾ ಮೂರನೇ ಸ್ಥಾನಕ್ಕೆ ಕುಸಿದಿದೆ. ಇರಾಕ್ ಮೊದಲ ಸ್ಥಾನದಲ್ಲಿದೆ.

ಉಕ್ರೇನ್‌ ಬಿಕ್ಕಟ್ಟು ಆರಂಭವಾದ ಬಳಿಕ ರಷ್ಯಾ ದೇಶವು ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಸಲು ಆರಂಭಿಸಿದೆ. ಭಾರತದ ಕಂಪನಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿವೆ. ಹೀಗಾಗಿ ರಷ್ಯಾ ಎರಡನೇ ಸ್ಥಾನಕ್ಕೆ ಬಂದಿದೆ ಎನ್ನುವುದನ್ನು ಅಂಕಿ–ಅಂಶಗಳು ಸೂಚಿಸುತ್ತಿವೆ.

ಭಾರತದ ತೈಲ ಕಂಪನಿಗಳು ಮೇ ತಿಂಗಳಿನಲ್ಲಿ ರಷ್ಯಾದಿಂದ 2.5 ಲಕ್ಷ ಬ್ಯಾರಲ್‌ ತೈಲ ಆಮದು ಮಾಡಿಕೊಂಡಿವೆ. ಮೇನಲ್ಲಿ ಭಾರತವು ಆಮದು ಮಾಡಿಕೊಂಡಿರುವ ಒಟ್ಟಾರೆ ತೈಲದಲ್ಲಿ ಇದರ ಪಾಲು ಶೇಕಡ 16ರಷ್ಟು ಆಗಿದೆ.

ADVERTISEMENT

ಭಾರತವು ಸಮುದ್ರ ಮಾರ್ಗವಾಗಿ ಏಪ್ರಿಲ್‌ನಲ್ಲಿ ಆಮದು ಮಾಡಿಕೊಂಡಿರುವ ತೈಲದಲ್ಲಿ ರಷ್ಯಾದ ಪಾಲು ಶೇ 5ರಷ್ಟು ಆಗಿದೆ. 2021 ಮತ್ತು 2022ರ ಮೊದಲ ತ್ರೈಮಾಸಿಕದಲ್ಲಿ ರಷ್ಯಾದ ಪಾಲು ಶೇ 1ಕ್ಕಿಂತಲೂ ಕಡಿಮೆ ಇತ್ತು.

ಭಾರತದ ಒಟ್ಟಾರೆ ತೈಲ ಬಳಕೆಗೆ ಹೋಲಿಸಿದರೆ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವುದು ಅತ್ಯಂತ ಕಡಿಮೆ ಪ್ರಮಾಣದ್ದಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಕಳೆದ ತಿಂಗಳು ಹೇಳಿದೆ.

ಅಮೆರಿಕ ಮತ್ತು ಚೀನಾ ಬಳಿಕ ಭಾರತವು ಅತಿ ಹೆಚ್ಚು ತೈಲ ಬಳಕೆ ಮಾಡುವ ದೇಶವಾಗಿದ್ದು, ದೇಶಿ ಬಳಕೆಯ ಶೇ 85ಕ್ಕೂ ಹೆಚ್ಚಿನ ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತಿದೆ.

ರಷ್ಯಾವು ಉಕ್ರೇನ್‌ ಮೇಲೆ ಸಮರ ಸಾರಿದ ನಂತರ ರಷ್ಯಾದ ಯೂರಲ್ಸ್ ಕಚ್ಚಾ ತೈಲ ಖರೀದಿಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಕೆಲವು ದೇಶಗಳು ಮತ್ತು ಕಂಪನಿಗಳು ರಷ್ಯಾದಿಂದ ತೈಲ ಖರೀದಿಸದಿರಲು ನಿರ್ಧರಿಸಿವೆ. ಇದರಿಂದಾಗಿ ರಷ್ಯಾದ ತೈಲ ರಫ್ತು ಕಡಿಮೆ ಆಗಿದ್ದು, ತೈಲದ ಬೆಲೆಯೂ ಇಳಿಕೆ ಕಂಡಿದೆ. ಭಾರತದ ಕಂಪನಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದು, ಪ್ರತಿ ಬ್ಯಾರಲ್‌ಗೆ 30 ಡಾಲರ್‌ಗಳವರೆಗೂ ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿ ಮಾಡಿವೆ.

ಮುಖ್ಯಾಂಶಗಳು

ರಿಯಾಯಿತಿ ದರದಿಂದಾಗಿ ಆಮದು ಹೆಚ್ಚಳ

ದೇಶಿ ಬಳಕೆಯ ಶೇ 85ರಷ್ಟು ಆಮದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.