ಪ್ರಾತಿನಿಧಿಕ ಚಿತ್ರ
ನವದೆಹಲಿ: ದಂಡ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬೆದರಿಕೆ ಒಡ್ಡಿದ್ದರೂ, ರಷ್ಯಾದಿಂದ ಕಚ್ಚಾ ತೈಲ ಖರೀದಿ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.
ರಷ್ಯಾದಿಂದ ಕಚ್ಚಾ ತೈಲ ಖರೀದಿಯು ‘ದೀರ್ಘಾವಧಿಯ ಗುತ್ತಿಗೆ ಒಪ್ಪಂದ’ ಎಂದು ಮೂಲವೊಂದು ಹೇಳಿದೆ. ‘ಈ ಖರೀದಿಯನ್ನು ಇದ್ದಕ್ಕಿದ್ದಂತೆ ನಿಲ್ಲಿಸುವುದು ಸುಲಭವಲ್ಲ’ ಎಂದು ಅದು ವಿವರಿಸಿದೆ.
ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಹಾಗೂ ಕಚ್ಚಾ ತೈಲವನ್ನು ಖರೀದಿಸುತ್ತಿರುವುದಕ್ಕೆ ಭಾರತದ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ಟ್ರಂಪ್ ಅವರು ಜುಲೈ ಕೊನೆಯಲ್ಲಿ ಹೇಳಿದ್ದಾರೆ. ಆದರೆ ದಂಡವು ಎಷ್ಟಿರುತ್ತದೆ ಎಂಬುದನ್ನು ಅವರು ತಿಳಿಸಿಲ್ಲ.
ಕೇಂದ್ರ ಸರ್ಕಾರದ ನೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಇಬ್ಬರು ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರವು ಕಂಪನಿಗಳಿಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯು ಹೇಳಿದೆ.
‘ತೈಲ ಖರೀದಿಯ ವಿಚಾರದಲ್ಲಿ ನಾವು ಮಾರುಕಟ್ಟೆಯಲ್ಲಿ ಏನು ಲಭ್ಯವಿದೆ, ಜಾಗತಿಕ ಪರಿಸ್ಥಿತಿ ಏನಿದೆ ಎಂಬುದನ್ನು ಗಮನಿಸುತ್ತೇವೆ’ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ವಕ್ತಾರ ರಣದೀಪ್ ಜೈಸ್ವಾಲ್ ಅವರು ಸುದ್ದಿಗಾರರಿಗೆ ಶುಕ್ರವಾರ ಹೇಳಿದ್ದರು.
ಭಾರತವು ರಷ್ಯಾದ ಜೊತೆ ‘ಸ್ಥಿರವಾದ ಹಾಗೂ ಕಾಲದ ಪರೀಕ್ಷೆಯನ್ನು ಗೆದ್ದಿರುವ’ ಪಾಲುದಾರಿಕೆಯನ್ನು ಹೊಂದಿದೆ. ಭಾರತವು ಬೇರೆ ದೇಶಗಳ ಜೊತೆ ಹೊಂದಿರುವ ಸಂಬಂಧವನ್ನು ಮೂರನೆಯ ದೇಶದ ಕನ್ನಡಕದ ಮೂಲಕ ಗ್ರಹಿಸಬಾರದು ಎಂದು ಕೂಡ ಜೈಸ್ವಾಲ್ ಅವರು ಹೇಳಿದ್ದರು.
ಅಮೆರಿಕದ ಶ್ವೇತಭವನದ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಆದರೆ, ರಷ್ಯಾದಿಂದ ಖರೀದಿಸುವ ಕಚ್ಚಾ ತೈಲಕ್ಕೆ ರಿಯಾಯಿತಿ ಕಡಿಮೆ ಆಗುತ್ತಿರುವ ಕಾರಣಕ್ಕೆ ಭಾರತದ ತೈಲ ಸಂಸ್ಕರಣಾ ಕಂಪನಿಗಳು ಅಲ್ಲಿಂದ ಕಚ್ಚಾ ತೈಲ ಖರೀದಿಸುವುದು ಕಡಿಮೆ ಆಗುತ್ತಿದೆ ಎಂದು ಮೂಲವೊಂದು ಈ ಈಚೆಗೆ ತಿಳಿಸಿದೆ.
ಕೇಂದ್ರ ಸರ್ಕಾರದ ಮಾಲೀಕತ್ವದ ತೈಲ ಮಾರಾಟ ಕಂಪನಿಗಳಾದ ಇಂಡಿಯನ್ ಆಯಿಲ್, ಹಿಂದುಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ, ಎಂಆರ್‌ಪಿಎಲ್ ಕಳೆದ ಒಂದು ವಾರದಿಂದ ರಷ್ಯಾದ ಕಚ್ಚಾ ತೈಲಕ್ಕೆ ಬೇಡಿಕೆ ಇರಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ಭಾರತವು ಆಮದು ಮಾಡಿಕೊಂಡಿರುವ ಕಚ್ಚಾ ತೈಲದಲ್ಲಿ ರಷ್ಯಾದ ಪಾಲು ಶೇ 35ರಷ್ಟಿದೆ. ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ ಭಾರತವು ರಷ್ಯಾದಿಂದ ಪ್ರತಿದಿನ 17.5 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.