ADVERTISEMENT

ಐಪಿಒ ಮೂಲಕ ಬಂಡವಾಳ ಸಂಗ್ರಹಿಸುವ ಆಲೋಚನೆ ಸದ್ಯಕ್ಕೆ ಇಲ್ಲ: ಸ್ಯಾಮ್ಸಂಗ್‌

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 15:44 IST
Last Updated 25 ಡಿಸೆಂಬರ್ 2025, 15:44 IST
.
.   

ನವದೆಹಲಿ: ‘ಭಾರತದಲ್ಲಿ ಸಾರ್ವಜನಿಕರಿಗೆ ಷೇರು ಮಾರಾಟ (ಐಪಿಒ) ಮಾಡುವ ಮೂಲಕ ಬಂಡವಾಳ ಸಂಗ್ರಹಿಸುವ ಆಲೋಚನೆ ಸದ್ಯಕ್ಕೆ ಇಲ್ಲ’ ಎಂದು ದಕ್ಷಿಣ ಕೊರಿಯಾ ಮೂಲದ ಎಲೆಕ್ಟ್ರಾನಿಕ್ಸ್‌ ಉಪಕರಣ ತಯಾರಿಕಾ ಕಂಪನಿ ಸ್ಯಾಮ್ಸಂಗ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಂಪನಿಯು ತನ್ನ ಉತ್ಪನ್ನಗಳಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆಯನ್ನು ವೇಗಗೊಳಿಸುವತ್ತ ಗಮನ ನೀಡುತ್ತಿದೆ. ಮಾರಾಟವನ್ನು ಹೆಚ್ಚಿಸಲು ಈಗ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರಿಗೆ ಬಡ್ಡಿರಹಿತ ಮಾಸಿಕ ಇಎಂಐ ಸೌಲಭ್ಯ ನೀಡಲಾಗುತ್ತಿದೆ. ಇದನ್ನು ಟೆಲಿವಿಷನ್‌, ವಾಶಿಂಗ್‌ ಮಷಿನ್‌ನಂತಹ ಗೃಹೋಪಯೋಗಿ ಉಪಕರಣಗಳಿಗೂ ವಿಸ್ತರಿಸಲಾಗುತ್ತಿದೆ ಎಂದು ಕಂಪನಿಯ ನೈಋತ್ಯ ಏಷ್ಯಾದ ಅಧ್ಯಕ್ಷ ಮತ್ತು ಸಿಇಒ ಜೆ.ಬಿ.ಪಾರ್ಕ್‌ ಹೇಳಿದ್ದಾರೆ.

ಸ್ಯಾಮ್ಸಂಗ್‌ನ ಇಎಂಐ ಯೋಜನೆಯಿಂದ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಶೇ 40ರಷ್ಟು ಹೆಚ್ಚಳವಾಗಿದ್ದು, ಉತ್ತರ ಭಾರತ ಮತ್ತು ಈಶಾನ್ಯ ಭಾರತದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಫೋನ್‌ಗಳು ಮಾರಾಟವಾಗಿವೆ.

ADVERTISEMENT

ಭಾರತದಲ್ಲಿ ಕಂಪನಿಯು ತನ್ನ ಉತ್ಪನ್ನಗಳ ತಯಾರಿಕೆಯನ್ನು ಇನ್ನಷ್ಟು ವಿಸ್ತರಿಸಲು ಕಾರ್ಯಕ್ರಮ ರೂಪಿಸುತ್ತಿದೆ. ಜೊತೆಗೆ ಭಾರತದಲ್ಲಿ ಮೊಬೈಲ್ ಫೋನ್‌ಗಳ ತಯಾರಿಕೆಗೆ ನೀಡುವ ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಗೆ ಅರ್ಜಿ ಸಲ್ಲಿಸಲಾಗಿದೆ ಎಂದಿದ್ದಾರೆ.

ಸ್ಯಾಮ್ಸಂಗ್‌ ಕಂಪನಿಯು ಉತ್ತರ ಪ್ರದೇಶದ ನೋಯ್ಡಾದಲ್ಲಿ ಜಗತ್ತಿನಲ್ಲಿ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಘಟಕವನ್ನು ಹೊಂದಿದೆ.

ಮೇಲ್ದರ್ಜೆಗೇರಿಸಿದ ಎ.ಐ ಆಧಾರಿತ ರೆಫ್ರಿಜರೇಟರ್‌ನಲ್ಲಿ ಗೂಗಲ್ ಜೆಮಿನಿಯನ್ನು ಇದೇ ಮೊದಲ ಬಾರಿಗೆ ಅಳವಡಿಸಲಾಗಿದೆ.

ದಕ್ಷಿಣ ಕೊರಿಯಾದ ಪ್ರಮುಖ ಕಂಪನಿಗಳಾದ ಹುಂಡೈ ಮೋಟರ್‌ ಇಂಡಿಯಾ ಮತ್ತು ಎಲ್‌ಜಿ ಎಲೆಕ್ಟ್ರಾನಿಕ್ಸ್, ಸ್ಥಳೀಯ ಮಾರುಕಟ್ಟೆಯಲ್ಲಿ ತಮ್ಮ ಮಾರಾಟವನ್ನು ಸದೃಢಗೊಳಿಸಲು ಬಂಡವಾಳ ಸಂಗ್ರಹ ಮಾಡಿವೆ. ಆದರೆ ಸ್ಯಾಮ್ಸಂಗ್‌ ಬಂಡವಾಳ ಸಂಗ್ರಹಕ್ಕಿಂತ ಆಂತರಿಕ ಬೆಳವಣಿಗೆಗೆ ಆದ್ಯತೆ ನೀಡುತ್ತಿದೆ.

ಜನವರಿ 4ರಂದು ಲಾಸ್ ವೇಗಾಸ್‌ನಲ್ಲಿ ನಡೆಯಲಿರುವ ವಿಶ್ವದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ ಪ್ರದರ್ಶನವಾದ ಸಿಇಎಸ್‌ 2026ರಲ್ಲಿನ ‘ದಿ ಫಸ್ಟ್ ಲುಕ್’ ಕಾರ್ಯಕ್ರಮದಲ್ಲಿ ಸ್ಯಾಮ್ಸಂಗ್‌ ಟಿವಿ ತಂತ್ರಜ್ಞಾನದಲ್ಲಿನ ನಾವೀನ್ಯಗಳನ್ನು ಪ್ರದರ್ಶನ ಮಾಡಲಿದೆ ಎಂದು  ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.