
ನವದೆಹಲಿ: ರೂಪಾಯಿ ಮೌಲ್ಯದ ಕುಸಿತದ ಬಗ್ಗೆ ತಾವು ಒಂದಿನಿತೂ ತಲೆ ಕೆಡಿಸಿಕೊಂಡಿಲ್ಲ ಎಂದು ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್ ಗುರುವಾರ ಹೇಳಿದ್ದಾರೆ.
ಆರ್ಥಿಕ ಬೆಳವಣಿಗೆಯು ತೀವ್ರವಾಗಿದ್ದ ಅವಧಿಯಲ್ಲಿ ಚೀನಾ ಮತ್ತು ಜಪಾನ್‌ನ ಕರೆನ್ಸಿಗಳು ಕೂಡ ಇದೇ ಬಗೆಯಲ್ಲಿ ಕುಸಿತ ಕಂಡಿದ್ದವು ಎಂದು ಸನ್ಯಾಲ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘90ರ ದಶಕದ ನಂತರದಲ್ಲಿ ರೂಪಾಯಿಗೆ ತನ್ನ ಮೌಲ್ಯವನ್ನು ತಾನಾಗಿಯೇ ಕಂಡುಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಅತಿಯಾದ ಅಸ್ಥಿರತೆಯನ್ನು ತಡೆಯಲು ಆರ್‌ಬಿಐ ತನ್ನಲ್ಲಿನ ಮೀಸಲನ್ನು ಬಳಕೆ ಮಾಡಿಕೊಳ್ಳುತ್ತದೆ’ ಎಂದು ತಿಳಿಸಿದ್ದಾರೆ.
‘ರೂಪಾಯಿ ಮತ್ತು ಅದು ಈಗ ಕಾಣುತ್ತಿರುವ ಅಪಮೌಲ್ಯವನ್ನು ಯಾವುದೋ ಆರ್ಥಿಕ ಚಿಂತೆಯ ಜೊತೆ ಸಮೀಕರಿಸಬಾರದು. ಏಕೆಂದರೆ, ಇತಿಹಾಸವನ್ನು ಗಮನಿಸಿದರೆ ಅರ್ಥ ವ್ಯವಸ್ಥೆಯು ಬಹಳ ವೇಗದ ಬೆಳವಣಿಗೆ ಕಾಣುವ ಸಂದರ್ಭದಲ್ಲಿ ಕರೆನ್ಸಿಯ ಮೌಲ್ಯ ಹಲವು ಬಾರಿ ಕುಸಿತ ಕಂಡಿರುವುದು ಗೊತ್ತಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಮಂಗಳವಾರ 91ಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿದಿದೆ. ‘ಜಪಾನಿನ ಅರ್ಥ ವ್ಯವಸ್ಥೆಯು ಬಹಳ ವೇಗವಾಗಿ ಬೆಳೆಯುತ್ತಿದ್ದಾಗ ಅಲ್ಲಿನ ಕರೆನ್ಸಿಯು ಬಹಳ ದುರ್ಬಲವಾಗಿತ್ತು. ಚೀನಾ ಇದೇ ಪರಿಸ್ಥಿತಿಯನ್ನು 90ರ ದಶಕದಲ್ಲಿ ಹಾಗೂ 2000ನೇ ಇಸವಿಯ ನಂತರದಲ್ಲಿ ಕಂಡಿತ್ತು’ ಎಂದಿದ್ದಾರೆ.
‘ಹೀಗಾಗಿ ರೂಪಾಯಿ ಮೌಲ್ಯದ ಇಳಿಕೆಯು ದೇಶದಲ್ಲಿ ಹಣದುಬ್ಬರಕ್ಕೆ ಕಾರಣವಾಗುತ್ತಿಲ್ಲದಿದ್ದರೆ, ಮೌಲ್ಯ ಇಳಿಕೆಯೊಂದೇ ಏನನ್ನೂ ಧ್ವನಿಸುವುದಿಲ್ಲ. ಮೌಲ್ಯ ಇಳಿಕೆಯಿಂದಾಗಿ ಹಣದುಬ್ಬರ ಹೆಚ್ಚಾಗುತ್ತಲೂ ಇಲ್ಲ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.