
ಎಸ್‌ಬಿಐ
ನವದೆಹಲಿ: ‘ಮುಂದಿನ ಆರ್ಥಿಕ ವರ್ಷದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ನೀಡಿದ ಗೃಹಸಾಲ ಮೊತ್ತವು ₹10 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ಸಿ.ಎಸ್.ಸೆಟ್ಟಿ ಹೇಳಿದ್ದಾರೆ.
ಗೃಹ ಸಾಲಕ್ಕೆ ಹೆಚ್ಚಿದ ಬೇಡಿಕೆ ಮತ್ತು ಬಡ್ಡಿ ದರ ಇಳಿಕೆಯು ಗೃಹ ಸಾಲ ನೀಡುವ ಪ್ರಮಾಣದಲ್ಲಿ ಏರಿಕೆಗೆ ಕಾರಣವಾಗಲಿವೆ ಎಂದು ಅವರು ಹೇಳಿದ್ದಾರೆ.
2011ರ ಮಾರ್ಚ್‌ನಲ್ಲಿ ಬ್ಯಾಂಕ್ ನೀಡಿದ ಗೃಹ ಸಾಲದ ಮೊತ್ತವು ₹1 ಲಕ್ಷ ಕೋಟಿಯಷ್ಟಿತ್ತು. 2024–25ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಬ್ಯಾಂಕ್‌ನ ಗೃಹ ಸಾಲದ ಮೊತ್ತವು ₹8.31 ಲಕ್ಷ ಕೋಟಿಗೆ ಏರಿಕೆಯಾಗಿ, ನವೆಂಬರ್ ವೇಳೆಗೆ ₹9 ಲಕ್ಷ ಕೋಟಿ ದಾಟಿದೆ. ಇದು ಬ್ಯಾಂಕ್‌ನ ಒಟ್ಟು ಸಾಲಗಳ ಶೇ 20ರಷ್ಟು ಎಂದು ಸೆಟ್ಟಿ ತಿಳಿಸಿದ್ದಾರೆ.
ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ನ ಗೃಹ ಸಾಲ ನೀಡಿಕೆಯು ಶೇ 14.4ರಷ್ಟು ಬೆಳವಣಿಗೆ ಕಂಡಿತ್ತು. ಮುಂದಿನ ಆರ್ಥಿಕ ವರ್ಷದಲ್ಲಿಯೂ ಶೇ 14ರಷ್ಟು ಪ್ರಗತಿ ಕಂಡು, ₹10 ಲಕ್ಷ ಕೋಟಿಯ ಮೈಲುಗಲ್ಲು ದಾಟಲಿದೆ ಎಂದು ಹೇಳಿದ್ದಾರೆ.
2024–25ರಲ್ಲಿ ಬ್ಯಾಂಕ್‌ನ ಗೃಹ ಸಾಲ ವಿಭಾಗದ ಎನ್‌ಪಿಎ ಶೇ 0.72ರಷ್ಟಿತ್ತು. ಈ ಪ್ರಮಾಣವು ಬ್ಯಾಂಕಿಂಗ್ ವಲಯದಲ್ಲಿ ಅತಿ ಕಡಿಮೆ ಎನ್‌ಪಿಎಗಳಲ್ಲಿ ಒಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.