
ಜಿಎಸ್‌ಟಿ
ನವದೆಹಲಿ: ಜಿಎಸ್‌ಟಿ ದರ ಇಳಿಕೆಯು ಚಿಲ್ಲರೆ ಹಣದುಬ್ಬರ ಪ್ರಮಾಣವು ಅಕ್ಟೋಬರ್‌ನಲ್ಲಿ ಶೇಕಡ 0.85ರಷ್ಟು ತಗ್ಗುವಂತೆ ಮಾಡಿದ್ದು, ಹಣದುಬ್ಬರದ ಇಳಿಕೆಯು ಮುಂದಿನ ದಿನಗಳಲ್ಲಿಯೂ ಕಾಣಲಿದೆ ಎಂದು ತಜ್ಞರು ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ಹಣದುಬ್ಬರ ಪ್ರಮಾಣವು ಶೇಕಡ 0.25ರಷ್ಟು ಆಗಿದೆ. ಇದು 12 ವರ್ಷಗಳ ಕನಿಷ್ಠ ಮಟ್ಟ.
ಚಿನ್ನದ ಬೆಲೆ ಹೆಚ್ಚಳದ ಕಾರಣದಿಂದಾಗಿ ವೈಯಕ್ತಿಕ ಆರೈಕೆ ವರ್ಗದ ಉತ್ಪನ್ನಗಳ ಹಣದುಬ್ಬರ ಪ್ರಮಾಣವು ಶೇ 57.8ರಷ್ಟು ಆಗಿದೆ. ಚಿನ್ನವನ್ನು ಹೊರಗಿರಿಸಿ ಪರಿಶೀಲಿಸಿದರೆ ಚಿಲ್ಲರೆ ಹಣದುಬ್ಬರ ಪ್ರಮಾಣವು ಅಕ್ಟೋಬರ್‌ನಲ್ಲಿ ಶೇಕಡ (–)0.57ರಷ್ಟು ಆಗುತ್ತದೆ ಎಂದು ಎಸ್‌ಬಿಐ ರಿಸರ್ಚ್ ಹೇಳಿದೆ.
‘ಚಿನ್ನವನ್ನು ಹೊರತುಪಡಿಸಿದರೆ, ಚಿಲ್ಲರೆ ಹಣದುಬ್ಬರ ಪ್ರಮಾಣವು ಮುಂದಿನ ಎರಡು ತಿಂಗಳವರೆಗೆ ನಕಾರಾತ್ಮಕ ಮಟ್ಟದಲ್ಲಿ ಇರುತ್ತದೆ ಎಂಬುದು ನಮ್ಮ ನಂಬಿಕೆ’ ಎಂದು ಎಸ್‌ಬಿಐ ಎಕೊವ್ರ್ಯಾಪ್ ವರದಿಯು ಹೇಳಿದೆ.
ಸೆಪ್ಟೆಂಬರ್ 22ರಂದು ಜಾರಿಗೆ ಬಂದ ಜಿಎಸ್‌ಟಿ ದರ ಪರಿಷ್ಕರಣೆಯು ಅಕ್ಟೋಬರ್ ತಿಂಗಳ ಚಿಲ್ಲರೆ ಹಣದುಬ್ಬರ ಪ್ರಮಾಣ ಇಳಿಕೆಗೆ ನೆರವಾಗಿದೆ.
‘ಜಿಎಸ್‌ಟಿ ಕಾರಣದಿಂದಾಗಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 0.65ರಿಂದ ಶೇ 0.75ರವರೆಗೆ ಇಳಿಕೆ ಆಗಬಹುದು ಎಂದು ನಾವು ಮೊದಲು ಅಂದಾಜು ಮಾಡಿದ್ದೆವು. ಆದರೆ ಜಿಎಸ್‌ಟಿ ಕಾರಣದಿಂದಾಗಿ ಆಗಿರುವ ಇಳಿಕೆಯು ಶೇ 0.85ರಷ್ಟಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.
ಜಿಎಸ್‌ಟಿ ದರ ಇಳಿಕೆಯ ಪ್ರಯೋಜನವು ಪೂರ್ಣ ಪ್ರಮಾಣದಲ್ಲಿ ಕಾಣಿಸಿದ್ದು ಅಕ್ಟೋಬರ್‌ನಲ್ಲಿ. ದರ ಪರಿಷ್ಕರಣೆಯ ಪ್ರಯೋಜನವು ಮುಂದಿನ ದಿನಗಳಲ್ಲಿಯೂ ಇರುವ ನಿರೀಕ್ಷೆ ಇದೆ ಎಂದು ಕ್ರಿಸಿಲ್ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ದೀಪ್ತಿ ದೇಶಪಾಂಡೆ ಹೇಳಿದ್ದಾರೆ.
ಡಿಸೆಂಬರ್‌ನಲ್ಲಿ ನಡೆಯಲಿರುವ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ಆರ್‌ಬಿಐ ರೆಪೊ ದರ ಇಳಿಕೆಯ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಅವರು ಅಂದಾಜಿಸಿದ್ದಾರೆ.