
ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ತನ್ನ ಗ್ರಾಹಕರ ಅನುಕೂಲಕ್ಕಾಗಿ ಯೋನೊ ಆ್ಯಪ್‌ನ ಹೊಸ ಆವೃತ್ತಿಯನ್ನು (2.0) ಸೋಮವಾರ ಬಿಡುಗಡೆ ಮಾಡಲಿದೆ.
‘ಬ್ಯಾಂಕ್‌ನ ಡಿಜಿಟಲ್ ಸೇವೆ ಒದಗಿಸುವ ಯೋನೊ ಆ್ಯಪ್‍ನ ಪ್ರಸ್ತುತ ಬಳಕೆದಾರರ ಸಂಖ್ಯೆ 10 ಕೋಟಿಯಷ್ಟಿದೆ. ಈ ಆ್ಯಪ್ ಬಿಡುಗಡೆ ಮಾಡುವ ಮೂಲಕ ಮುಂದಿನ ಎರಡು ವರ್ಷದಲ್ಲಿ ಬಳಕೆದಾರರ ಸಂಖ್ಯೆಯನ್ನು 20 ಕೋಟಿಗೆ ಹೆಚ್ಚಿಸುವ ಗುರಿ ಇದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ಸಿ.ಎಸ್.ಸೆಟ್ಟಿ ಹೇಳಿದ್ದಾರೆ.
‘ಯೋನೊ 2.0’ಅನ್ನು ಮೇಲ್ದರ್ಜೆಗೇರಿಸಲಾಗಿದ್ದು, ಗ್ರಾಹಕರಿಗೆ ಉತ್ತಮ ಅನುಭವ ಮತ್ತು ಬ್ಯಾಂಕ್‌ಗೆ ದೃಢವಾದ ಡಿಜಿಟಲ್ ವೇದಿಕೆಯನ್ನು ನೀಡುತ್ತದೆ. ಮುಂದಿನ ಆರರಿಂದ ಎಂಟು ತಿಂಗಳಿನಲ್ಲಿ ಪೂರ್ಣ ಪ್ರಮಾಣದ ವೈಶಿಷ್ಟ್ಯಗಳೊಂದಿಗೆ ಇದು ಕಾರ್ಯಾರಂಭ ಮಾಡಲಿದೆ ಎಂದು ಹೇಳಿದ್ದಾರೆ.
ಆರ್‌ಬಿಐನ ಎಂಪಿಸಿ ಸಮಿತಿ ಇತ್ತೀಚೆಗೆ ರೆಪೊ ದರ ಇಳಿಕೆ ಮಾಡಿದೆ. ಹೀಗಾಗಿ ಬ್ಯಾಂಕ್, ರೆಪೊ ದರ ಆಧಾರಿತ ಸಾಲದ ಮೇಲಿನ ಬಡ್ಡಿ ದರವನ್ನು ಶೇ 0.25ರಷ್ಟು ತಗ್ಗಿಸಿದ್ದು, ಶೇ 7.90ರಷ್ಟಾಗಿದೆ. ಪರಿಷ್ಕೃತ ದರವು ಸೋಮವಾರದಿಂದ ಜಾರಿಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.