ADVERTISEMENT

ಅದಾನಿ ಸಮೂಹದ ಕಂಪನಿಗಳ ವಿರುದ್ಧ ತನಿಖೆ: ಕೇಂದ್ರ ಸರ್ಕಾರ

ಪಿಟಿಐ
Published 19 ಜುಲೈ 2021, 16:08 IST
Last Updated 19 ಜುಲೈ 2021, 16:08 IST

ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ಅದಾನಿ ಸಮೂಹಕ್ಕೆ ಸೇರಿದ ಕೆಲವು ಕಂಪನಿಗಳ ವಿರುದ್ಧ, ನಿಯಮಗಳನ್ನು ಪಾಲಿಸದ ಆರೋಪದ ಅಡಿ ತನಿಖೆ ನಡೆಸುತ್ತಿವೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ಸೋಮವಾರ ತಿಳಿಸಿದೆ.

ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ‘ತನ್ನ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಅದಾನಿ ಸಮೂಹದ ಕೆಲವು ಕಂಪನಿಗಳ ವಿರುದ್ಧ ಸೆಬಿ ತನಿಖೆ ನಡೆಸುತ್ತಿದೆ’ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ವಿವರವನ್ನು ಅವರು ನೀಡಿಲ್ಲ. ತನಗೆ ಸಂಬಂಧಿಸಿದ ಕಾನೂನುಗಳ ವಿಚಾರದಲ್ಲಿ ಡಿಆರ್‌ಐ, ಅದಾನಿ ಸಮೂಹದ ಕೆಲವು ಕಂಪನಿಗಳ ವಿರುದ್ಧ ತನಿಖೆ ನಡೆಸುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ಅದಾನಿ ಸಮೂಹದ ಯಾವ ಕಂಪನಿಗಳ ವಿರುದ್ಧ ಸೆಬಿ ಹಾಗೂ ಡಿಆರ್‌ಐ ತನಿಖೆ ನಡೆಸುತ್ತಿವೆ ಎಂಬ ವಿವರವನ್ನು ಸಚಿವರು ನೀಡಿಲ್ಲ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅದಾನಿ ಸಮೂಹದ ವಕ್ತಾರರು, ‘ನಾವು ಸೆಬಿ ನಿಯಮಗಳನ್ನು ಯಾವತ್ತಿಗೂ ಪಾಲಿಸುತ್ತ ಬಂದಿದ್ದೇವೆ. ಈಚೆಗೆ ಸೆಬಿ ಕಡೆಯಿಂದ ನಮಗೆ ಯಾವುದೇ ಮಾಹಿತಿ ಕೋರಿ ಮನವಿ ಬಂದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಡಿಆರ್‌ಐ ತನಿಖೆಗೆ ಸಂಬಂಧಿಸಿದಂತೆ ವಕ್ತಾರರು, ‘ವಿಚಾರವು ಈಗ ಮೇಲ್ಮನವಿ ನ್ಯಾಯಮಂಡಳಿಯ ಎದುರು ಇದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.