ADVERTISEMENT

63 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್‌

ಪಿಟಿಐ
Published 30 ನವೆಂಬರ್ 2022, 15:52 IST
Last Updated 30 ನವೆಂಬರ್ 2022, 15:52 IST

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 63 ಸಾವಿರದ ಗಡಿ ದಾಟಿ ವಹಿವಾಟು ಕೊನೆಗೊಳಿಸಿದೆ. ಸತತ ಏಳನೆಯ ದಿನವೂ ಏರಿಕೆ ಕಂಡ ಸೆನ್ಸೆಕ್ಸ್‌ ಬುಧವಾರದ ವಹಿವಾಟಿನ ಅಂತ್ಯಕ್ಕೆ 417 ಅಂಶ ಜಿಗಿದು, 63,099 ಅಂಶಗಳಿಗೆ ತಲುಪಿದೆ.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 140 ಅಂಶ ಏರಿಕೆ ಕಂಡಿದೆ. ‘ವಿದೇಶಿ ಹೂಡಿಕೆಯ ಒಳಹರಿವು ಮಾರುಕಟ್ಟೆಯ ಮೇಲೆ ಒಳ್ಳೆಯ ಪರಿಣಾಮ ಉಂಟುಮಾಡಿದೆ. ಅಮೆರಿಕದ ಫೆಡರಲ್ ರಿಸರ್ವ್‌ ಕೈಗೊಳ್ಳುವ ತೀರ್ಮಾನಕ್ಕೆ ಮಾರುಕಟ್ಟೆ ಸ್ಪಂದಿಸಲಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಸೆನ್ಸೆಕ್ಸ್‌ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿರುವುದರ ಜೊತೆಯಲ್ಲಿಯೇ, ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಇದುವರೆಗಿನ ದಾಖಲೆಯ ಮಟ್ಟವಾದ ₹ 288.50 ಲಕ್ಷ ಕೋಟಿಗೆ ಬುಧವಾರ ತಲುಪಿದೆ.

ADVERTISEMENT

ಏಳು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 7.59 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 1.83ರಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್‌ಗೆ 84.55 ಡಾಲರ್‌ನಂತೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.